ವಿವಾದದ ನಂತರ ಮತ್ತೊಂದು ಪತ್ರಿಕಾಗೋಷ್ಠಿ : ಮಹಿಳಾ ಪತ್ರಕರ್ತರನ್ನು ಆಹ್ವಾನಿಸಿದ ಅಫ್ಘನ್ ವಿದೇಶಾಂಗ ಸಚಿವ
Photo | indianexpress
ಹೊಸ ದಿಲ್ಲಿ: ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಗೆ ಮಹಿಳಾ ಪತ್ರಕರ್ತರನ್ನು ನಿರ್ಬಂಧಿಸಿ ತೀವ್ರ ವಿವಾದಕ್ಕೆ ಗುರಿಯಾಗಿದ್ದ ಅಫ್ಘನ್ ವಿದೇಶಾಂಗ ಸಚಿವ ಅಮೀರ್ ಮುತ್ತಾಕಿ, ರವಿವಾರ ಮತ್ತೊಂದು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದು, ಈ ಬಾರಿ ಅದಕ್ಕೆ ಮಹಿಳಾ ಪತ್ರಕರ್ತರನ್ನೂ ಆಹ್ವಾನಿಸಿದ್ದಾರೆ.
ಒಂದು ವಾರದ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಮುತ್ತಾಕಿ, ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಗೆ ಯಾವುದೇ ಮಹಿಳಾ ಪತ್ರಕರ್ತೆಗೆ ಅವಕಾಶ ನೀಡಿರಲಿಲ್ಲ. ವೈರಲ್ ಆಗಿದ್ದ ಶುಕ್ರವಾರ ನಡೆದಿದ್ದ ಈ ಪತ್ರಿಕಾ ಗೋಷ್ಠಿಯ ಚಿತ್ರಗಳಲ್ಲಿ ಕೇವಲ ಪುರುಷ ಪತ್ರಕರ್ತರು ಉಪಸ್ಥಿತರಿರುವುದು ಕಂಡು ಬಂದಿತ್ತು. ಈ ನಡೆಯನ್ನು ಪತ್ರಕರ್ತರು, ವಿರೋಧ ಪಕ್ಷಗಳ ನಾಯಕರು ಹಾಗೂ ವಕೀಲರು ಖಂಡಿಸಿದ್ದರು.
ಮಹಿಳಾ ಪತ್ರಕರ್ತರನ್ನು ಪತ್ರಿಕಾಗೋಷ್ಠಿಯಿಂದ ಹೊರಗಿಟ್ಟ ನಡೆಯನ್ನು ತೀವ್ರ ತಾರತಮ್ಯಕಾರಿ ಎಂದು ಕಟುವಾಗಿ ಖಂಡಿಸಿದ್ದ ದಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್ಸ್, ವಿಯೆನ್ನಾ ಒಡಂಬಡಿಕೆಯಡಿ ಇದಕ್ಕೆ ರಾಜತಾಂತ್ರಿಕ ಮಾನ್ಯತೆ ಇದೆ ಎಂಬ ಸಮರ್ಥನೆಯನ್ನು ತಳ್ಳಿ ಹಾಕಿತ್ತು.
ಈ ನಡೆಯ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ, ರವಿವಾರ ಮತ್ತೊಂದು ಪತ್ರಿಕಾ ಗೋಷ್ಠಿ ಹಮ್ಮಿಕೊಂಡಿರುವ ಅಫ್ಘನ್ ಸಚಿವರ ತಂಡ, ಈ ಪತ್ರಿಕಾ ಗೋಷ್ಠಿಯು ಎಲ್ಲ ಮಾಧ್ಯಮ ಸಿಬ್ಬಂದಿಗಳಿಗೂ ಮುಕ್ತವಾಗಿದೆ ಎಂದು ಪ್ರಕಟಿಸಿದೆ.
2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರ ಅಧಿಕಾರಕ್ಕೆ ಮರಳಿದ ನಂತರ, ಇದೇ ಪ್ರಥಮ ಬಾರಿಗೆ ತಾಲಿಬಾನ್ ನ ಹಿರಿಯ ನಾಯಕ ಮುತ್ತಾಕಿ ಭಾರತದ ಭೇಟಿಗಾಗಿ ಗುರುವಾರ ಹೊಸ ದಿಲ್ಲಿಗೆ ಆಗಮಿಸಿದ್ದರು.