ಮಧ್ಯಪ್ರದೇಶ: ಕೆಮ್ಮಿನ ಸಿರಪ್ ದುರಂತದ ಬೆನ್ನಲ್ಲೇ ಔಷಧಿಗಳಲ್ಲಿ ಹುಳುಗಳು ಪತ್ತೆ!
ಸಾಂದರ್ಭಿಕ ಚಿತ್ರ (AI-Grok)
ಗ್ವಾಲಿಯರ್: ಮಧ್ಯಪ್ರದೇಶದಲ್ಲಿ ವಿಷಪೂರಿತ ಕೆಮ್ಮು ಔಷಧಿಯನ್ನು ಸೇವಿಸಿ ಮಕ್ಕಳು ಮೃತಪಟ್ಟ ಘಟನೆಯ ನೆನಪು ಮಾಸುವ ಮುನ್ನವೇ, ಇಲ್ಲಿನ ಸರಕಾರಿ ಆಸ್ಪತ್ರೆಯೊಂದರಲ್ಲಿ ಮಗುವೊಂದಕ್ಕೆ ನೀಡಲಾಗಿದ್ದ ಆ್ಯಂಟಿಬಯಾಟಿಕ್ ಔಷಧದಲ್ಲಿ ಹುಳುಗಳು ಕಂಡು ಬಂದಿವೆ ಎಂಬ ಆರೋಪಗಳು ಕೇಳಿ ಬಂದಿವೆ.
ತನ್ನ ಮಗುವಿಗೆ ನೀಡಲಾಗಿದ್ದ ಔಷಧಿಯ ಕುರಿತು ಮಹಿಳೆಯೊಬ್ಬರು ದೂರು ನೀಡಿದ ಬೆನ್ನಿಗೇ, ಗ್ವಾಲಿಯರ್ ಜಿಲ್ಲೆಯ ಮೊರಾರ್ ಪಟ್ಟಣದಲ್ಲಿರುವ ಈ ಸರಕಾರಿ ಆಸ್ಪತ್ರೆಯಲ್ಲಿರುವ ಎಲ್ಲ ಅಝಿಥ್ರೊಮೈಸಿನ್ ಔಷಧಿಯ ಸಂಗ್ರಹವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಔಷಧಿಯ ಮಾದರಿಗಳನ್ನು ಭೋಪಾಲ್ ನಲ್ಲಿರುವ ಪ್ರಯೋಗಾಲಯವೊಂದಕ್ಕೆ ಪರೀಕ್ಷೆಗಾಗಿ ರವಾನಿಸಲಾಗಿದೆ ಅವರು ಹೇಳಿದ್ದಾರೆ.
ಮಕ್ಕಳಲ್ಲಿ ಕಂಡು ಬರುವ ವಿವಿಧ ಸೋಂಕುಗಳಿಗಾಗಿ ಅಝಿಥ್ರೊಮೈಸಿನ್ ಆ್ಯಂಟಿ ಬಯಾಟಿಕ್ ಓರಲ್ ಸಸ್ಪೆನ್ಷನ್ ಅನ್ನು ಸಾಮಾನ್ಯವಾಗಿ ನೀಡಲಾಗುತ್ತದೆ.
ಇದು ಜೆನೆರಿಕ್ ಔಷಧಿಯಾಗಿದ್ದು, ಈ ಔಷಧಿಯನ್ನು ಮಧ್ಯಪ್ರದೇಶ ಮೂಲದ ಕಂಪನಿಯೊಂದು ತಯಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಮೊರಾರ್ ನಲ್ಲಿನ ಸರಕಾರಿ ಆಸ್ಪತ್ರೆಯಲ್ಲಿನ ಮಹಿಳೆಯೊಬ್ಬರು ಅಝಿಥ್ರೊಮೈಸಿನ್ ಓರಲ್ ಸಸ್ಪೆನ್ಷನ್ ನಲ್ಲಿ ಹುಳುಗಳಿವೆ ಎಂದು ದೂರು ನೀಡಿದ್ದಾರೆ. ಆ ಮಹಿಳೆ ತಂದಿದ್ದ ಬಾಟಲಿ ತೆರೆದಿದ್ದರೂ, ತಕ್ಷಣವೇ ಈ ಕುರಿತು ತನಿಖೆ ಕೈಗೊಳ್ಳಲಾಗಿದೆ” ಎಂದು ಔಷಧ ಪರೀಕ್ಷಕಿ ಅನುಭೂತಿ ಶರ್ಮ ಹೇಳಿದ್ದಾರೆ.
ಮೊರಾರ್ ನಲ್ಲಿನ ಆಸ್ಪತ್ರೆಗೆ ಸರಬರಾಜು ಮಾಡಲಾಗಿದ್ದ ಹಾಗೂ ಸಂಗ್ರಹಿಸಿಡಲಾಗಿದ್ದ ಎಲ್ಲ 306 ಬಾಟಲಿ ಔಷಧಿಯನ್ನು ವಾಪಸು ಪಡೆದು, ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೆಲವು ಬಾಟಲಿಗಳ ಪ್ರಾಥಮಿಕ ಪರೀಕ್ಷೆಯಲ್ಲಿ ಯಾವುದೇ ಹುಳುಗಳು ಕಂಡು ಬಂದಿಲ್ಲವಾದರೂ, ಪರೀಕ್ಷೆಯ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.
ಭೋಪಾಲ್ ನಲ್ಲಿನ ಪ್ರಯೋಗಾಲಯವೊಂದಕ್ಕೆ ಪರೀಕ್ಷೆಗಾಗಿ ಕೆಲವು ಬಾಟಲಿಗಳನ್ನು ರವಾನಿಸಲಾಗಿದೆ. ಈ ಔಷಧಿಯ ಮಾದರಿಯನ್ನೂ ಕೋಲ್ಕತ್ತಾದಲ್ಲಿರುವ ಕೇಂದ್ರ ಔಷಧ ಪ್ರಯೋಗಾಲಯಕ್ಕೆ ರವಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಶಂಕಿತ ಕಲಬೆರಕೆಯ ಕೆಮ್ಮು ಔಷಧಿ ಸೇವನೆಯಿಂದ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ 24 ಮಕ್ಕಳು ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದರು. ಈ ದುರಂತದ ಬೆನ್ನಿಗೇ, ಭಾರತದಲ್ಲಿ ಪತ್ತೆಯಾಗಿದ್ದ ಕಳಪೆ ದರ್ಜೆಯ ಕೆಮ್ಮು ಔಷಧಿಗಳಾದ ಕೋಲ್ಡ್ರಿಫ್, ರೆಸ್ಪಿಫ್ರೆಶ್ ಟಿಆರ್ ಹಾಗೂ ರೀಲೈಫ್ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಮುನ್ನೆಚ್ಚರಿಕೆ ಬಿಡುಗಡೆ ಮಾಡಿತ್ತು.