×
Ad

ಅಮಿತ್ ಶಾರೊಂದಿಗೆ ಭೇಟಿ: ಮಹಾಯುತಿ ಸರಕಾರದಲ್ಲಿ ಆಂತರಿಕ ಬಿಕ್ಕಟ್ಟು ಕುರಿತ ಆರೋಪಗಳನ್ನು ಅಲ್ಲಗಳೆದ ಏಕನಾಥ್ ಶಿಂದೆ

Update: 2025-04-14 14:01 IST

ಏಕನಾಥ್ ಶಿಂದೆ (PTI)

ಹೊಸದಿಲ್ಲಿ: ಮಹಾಯುತಿ ಸರಕಾರದಲ್ಲಿ ಉದ್ಭವಿಸಿದ್ದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ, ಇದರ ಬೆನ್ನಿಗೇ, ಮಹಾಯುತಿ ಸರಕಾರದಲ್ಲಿ ಆಂತರಿಕ ಬಿಕ್ಕಟ್ಟಿದೆ ಎಂಬ ವದಂತಿಗಳನ್ನು ರವಿವಾರ ಅಲ್ಲಗಳೆದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಮಿತ್ ಶಾ ಅವರು ಎನ್‌ಡಿಎ ಮೈತ್ರಿಕೂಟ ಹಾಗೂ ಮಹಾಯುತಿ ಮೈತ್ರಿಕೂಟದ ನಾಯಕರಾಗಿದ್ದಾರೆ. ಅವರು ನಿನ್ನೆ (ಶನಿವಾರ) ರಾಯಗಢದಲ್ಲಿದ್ದರು, ಮುಂಬೈನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರು ನಮ್ಮ ಮೈತ್ರಿಕೂಟದ ನಾಯಕರಾಗಿರುವುದರಿಂದ, ನಾವು ಸಹಜವಾಗಿ ಪರಸ್ಪರ ಭೇಟಿ ಮಾಡುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

"ನಮ್ಮ ಭೇಟಿಯ ವೇಳೆ, ನಾವು ರಾಜ್ಯದಲ್ಲಿ ಪ್ರಗತಿಯಲ್ಲಿರುವ ಅಭಿವೃದ್ಧಿ ಯೋಜನೆಗಳ ಕುರಿತು ಅವರೊಂದಿಗೆ ಚರ್ಚಿಸಿದೆವು ಹಾಗೂ ಮಾಹಿತಿ ನೀಡಿದೆವು" ಎಂದೂ ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಅದಿತಿ ತತ್ಕರೆ ಅವರನ್ನು ನಾಶಿಕ್ ಹಾಗೂ ರಾಯಗಢ ಜಿಲ್ಲೆಗಳ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದರಿಂದ, ಶಿವಸೇನೆ, ಎನ್‌ಸಿಪಿ ಹಾಗೂ ಬಿಜೆಪಿಯ ನಡುವೆ ಈ ನೇಮಕದ ಕುರಿತು ತೀವ್ರ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಿವೆ ಎಂಬ ವದಂತಿಗಳು ಭುಗಿಲೆದ್ದಿದ್ದವು. ಈ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ನಡುವಿನ ಸಭೆಯು ಮಹತ್ವ ಪಡೆದುಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News