×
Ad

ಅಪ್ರಾಪ್ತ ವಿದ್ಯಾರ್ಥಿಗಳಿಂದ ಶಿಕ್ಷಕನ ಮೇಲೆ ಗುಂಡೇಟು: ಇನ್ನೂ 39 ಸುತ್ತು ಗುಂಡು ಹಾರಿಸುವುದಾಗಿ ಬೆದರಿಕೆ

Update: 2023-10-06 11:12 IST

ಸಾಂದರ್ಭಿಕ ಚಿತ್ರ (PTI)

ಆಗ್ರಾ: ಅಪ್ರಾಪ್ತ ವಿದ್ಯಾರ್ಥಿಗಳಿಬ್ಬರು ತಮ್ಮ ಶಿಕ್ಷಕರಿಗೆ ಗುಂಡಿನ ದಾಳಿ ನಡೆಸಿ, ಬೆದರಿಕೆ ಹಾಕಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಘಟನೆಯ ನಂತರ ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗಿದ್ದರೂ, ಅವರು 25 ಸೆಕೆಂಡ್ ಗಳ ವಿಡಿಯೊವೊಂದನ್ನು ಹರಿಬಿಟ್ಟಿದ್ದು, ಇಂತಹ ಇನ್ನೂ 39 ಗುಂಡುಗಳನ್ನು ಶಿಕ್ಷಕರಿಗೆ ಹೊಡೆಯಲಾಗುವುದು ಎಂದು ಬೆದರಿಕೆ ಒಡ್ಡಿದ್ದಾರೆ ಎಂದು indiatoday.in ವರದಿ ಮಾಡಿದೆ.

ಸುಮಿತ್ ಎಂದು ಗುರುತಿಸಲಾಗಿರುವ ಸಂತ್ರಸ್ತ ಶಿಕ್ಷಕರ ತರಬೇತಿ ಕೇಂದ್ರದದಲ್ಲಿ ತರಗತಿ ಕಲಿಯುತ್ತಿರುವ ಇಬ್ಬರೂ ವಿದ್ಯಾರ್ಥಿಗಳು ಅವರನ್ನು ತರಗತಿಯಿಂದ ಹೊರಗೆ ಕರೆದು, ಪಿಸ್ತೂಲ್ ನಿಂದ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡೇಟಿನಲ್ಲಿ ಶಿಕ್ಷಕರ ಎಡಗಾಲಿಗೆ ಗಾಯವಾಗಿದೆ.

ಘಟನೆ ಬೆನ್ನಲ್ಲೇ ವಿದ್ಯಾರ್ಥಿಗಳು ಸ್ಥಳದಿಂದ ಮೋಟರ್ ಬೈಕ್ ನಲ್ಲಿ ಪರಾರಿಯಾಗಿದ್ದರೂ, ದಾರಿ ಮಧ್ಯದಲ್ಲಿ ಬೆದರಿಕೆ ವಿಡಿಯೊವನ್ನು ಚಿತ್ರೀಕರಿಸಿದ್ದಾರೆ ಎಂದು ಹೇಳಲಾಗಿದೆ.

ಆ ವಿಡಿಯೊದಲ್ಲಿ, ನಾವು ಶಿಕ್ಷಕರಿಗೆ 40 ಗುಂಡೇಟು ಹೊಡೆಯಬೇಕಿದ್ದು, ಮುಂದಿನ ಆರು ತಿಂಗಳಲ್ಲಿ ಮತ್ತೆ 39 ಗುಂಡೇಟುಗಳನ್ನು ಹೊಡೆಯುತ್ತೇವೆ ಎಂದು ಹೇಳುತ್ತಿರುವುದನ್ನು ಕೇಳಬಹುದಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಗ್ರಾ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಸೋನಮ್ ಕುಮಾರ್, ದಾಳಿಗೆ ಶಿಕ್ಷಕರ ಹಿರಿಯ ಸಹೋದರ ಹಾಗೂ ವಿದ್ಯಾರ್ಥಿಗಳ ನಡುವೆ ನಡೆದಿರುವ ಜಗಳ ಕಾರಣವಿರುವಂತೆ ತೋರುತ್ತಿದ್ದು, ಅವರಿಬ್ಬರೂ ಅದೇ ತರಬೇತಿ ಕೇಂದ್ರದ ತರಗತಿಗೆ ಹಾಜರಾಗುತ್ತಿದ್ದರು. ಇಬ್ಬರೂ ಆರೋಪಿಗಳು ಹಾಗೂ ಸಂತ್ರಸ್ತರು ಮಲುಪುರ್ ಗ್ರಾಮದವರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ನಡುವೆ, ಗಾಯಾಳು ಶಿಕ್ಷಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಖಂಡೌಲಿ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅಪ್ರಾಪ್ತ ಆರೋಪಿಗಳನ್ನು ಬಂಧಿಸಲು ಉಪ ಪೊಲೀಸ್ ಆಯುಕ್ತ ಸೋನಮ್ ಕುಮಾರ್ ಅವರು ಹಲವು ತಂಡಗಳನ್ನು ರಚಿಸಿದ್ದಾರೆ. ಪ್ರಕರಣದ ಕುರಿತು ಮತ್ತಷ್ಟು ತನಿಖೆ ಪ್ರಗತಿಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News