×
Ad

ಬಿಜೆಪಿಯೊಂದಿಗಿನ ಮೈತ್ರಿಗೆ ತೀವ್ರ ಅಸಮಾಧಾನ: ಎಐಎಡಿಎಂಕೆ ನಾಯಕ ಅನ್ವರ್ ರಾಝಾ ಡಿಎಂಕೆಗೆ ಸೇರ್ಪಡೆ

Update: 2025-07-21 13:44 IST

ಅನ್ವರ್ ರಾಝಾ (Photo credit: milligazette.com)

ಚೆನ್ನೈ: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ಎಐಎಡಿಎಂಕೆ ನಾಯಕ ಅನ್ವರ್ ರಾಝಾ ಸೋಮವಾರ ಆಡಳಿತಾರೂಢ ಡಿಎಂಕೆಗೆ ಸೇರ್ಪಡೆಯಾಗಿದ್ದಾರೆ. ಆ ಮೂಲಕ, ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟಕ್ಕೆ ಮೊದಲ ಹಿನ್ನಡೆಯುಂಟಾಗಿದೆ.

ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಚಿವ ಸಂಪುಟದಲ್ಲಿ 2001ರಿಂದ 2006ರವರೆಗೆ ಸಚಿವರಾಗಿದ್ದ ರಾಝಾ, ಎಐಎಡಿಎಂಕೆಯ ಪ್ರಮುಖ ಮುಸ್ಲಿಂ ನಾಯಕರಾಗಿದ್ದರು. ಆದರೆ, 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಕ್ರಮವನ್ನು ಅವರು ತೀವ್ರವಾಗಿ ಆಕ್ಷೇಪಿಸುತ್ತಾ ಬಂದಿದ್ದರು.

ಆದರೆ, ಅನ್ವರ್ ರಾಝಾ ಅವರು ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗುವುದಕ್ಕೂ ಕೆಲವೇ ಕ್ಷಣಗಳ ಮುನ್ನ, ಎಐಎಡಿಎಂಕೆ ಪಕ್ಷವು ಅವರನ್ನು ಪಕ್ಷದ ಸಂಘಟನಾತ್ಮಕ ಕಾರ್ಯದರ್ಶಿ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿತು. ಎಐಎಡಿಎಂಕೆ ಹಾಗೂ ಬಿಜೆಪಿ ನಡುವಿನ ಮೈತ್ರಿಯ ಬಗ್ಗೆ ಆರಂಭದಿಂದಲೂ ಕಟು ಟೀಕೆ ಮಾಡುತ್ತಾ, ಪಕ್ಷವನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ಅನ್ವರ್ ರಾಝಾ ಅವರು ಡಿಎಂಕೆ ಪಕ್ಷ ಸೇರ್ಪಡೆಯಾಗಿರುವುದು ಅಚ್ಚರಿಯ ನಡೆಯೇನಲ್ಲ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಪಕ್ಷಕ್ಕೆ ಅನ್ವರ್ ರಾಝಾ ಸೇರ್ಪಡೆಯಾಗಿರುವುದರಿಂದ, ಅಲ್ಪಸಂಖ್ಯಾತರ ಬಾಹುಳ್ಯ ಹೊಂದಿರುವ ರಾಮನಾಥಪುರಂ ಜಿಲ್ಲೆಯಲ್ಲಿ ಡಿಎಂಕೆಗೆ ಹೊಸ ಶಕ್ತಿ ಬಂದಂತಾಗಿದೆ. ಅವರು ರಾಮನಾಥಪುರಂನ ಮಾಜಿ ಶಾಸಕ ಮತ್ತು ಸಂಸದ ಕೂಡಾ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News