“ಬಿಜೆಪಿಯ ಬಿ ಟೀಮ್”: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ BJP ಜೊತೆ AIMIM ಮೈತ್ರಿ ಬಗ್ಗೆ ಕಾಂಗ್ರೆಸ್ ಟೀಕೆ
AIMIM ನಾಯಕ ಅಸದುದ್ದೀನ್ ಉವೈಸಿ / ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ (Photo: PTI)
ಮುಂಬೈ: ಬಿಜೆಪಿ-ಎಐಎಂಐಎಂ ಮೈತ್ರಿ ರಾಷ್ಟ್ರವ್ಯಾಪಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಅಕೋಟ್ ಪಟ್ಟಣದಲ್ಲಿ ನಾಮನಿರ್ದೇಶಿತ ಕೌನ್ಸಿಲರ್ ಆಯ್ಕೆಗೆ ಸಂಬಂಧಿಸಿ ಮತ್ತೊಮ್ಮೆ ಬಿಜೆಪಿ-ಎಐಎಂಐಎಂ ಮೈತ್ರಿ ಮಾಡಿಕೊಂಡಿದೆ.
ಎಐಎಂಐಎಂ ಕೌನ್ಸಿಲರ್‌ಗಳು ನಾಮನಿರ್ದೇಶಿತ ಕೌನ್ಸಿಲರ್ ಸ್ಥಾನಕ್ಕೆ ಬಿಜೆಪಿ ನಾಯಕನ ಪುತ್ರ ಜಿತೇನ್ ಬರೇಥಿಯಾ ಅವರನ್ನು ಬೆಂಬಲಿಸಿದ್ದಾರೆ.
ಈ ಮೊದಲು ಅಕೋಟ್‌ನಲ್ಲಿ ಬಿಜೆಪಿ-ಎಐಎಂಐಎಂ ಮೈತ್ರಿಯು ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟು ಹಾಕಿತ್ತು. ಇದರ ಬೆನ್ನಲ್ಲೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೈತ್ರಿ ಮುರಿಯುವಂತೆ ನಿರ್ದೇಶಿಸಿದ್ದರು. ಮೈತ್ರಿಗೆ ಹೊಣೆಗಾರನನ್ನಾಗಿ ಮಾಡಿ ಸ್ಥಳೀಯ ಶಾಸಕ ಪ್ರಕಾಶ್ ಭರ್ಸಕಲೆ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ನೀಡಿತ್ತು.
ಈ ಬೆಳವಣಿಗೆಗಳ ನಂತರ ಎಐಎಂಐಎಂ ಪಕ್ಷ ಬಿಜೆಪಿ ನೇತೃತ್ವದ ಅಕೋಟ್ ವಿಕಾಸ್ ಮಂಚ್‌ನಿಂದ ಹೊರಬಂದಿತ್ತು.
ಆದರೆ ಬಿಜೆಪಿ-ಎಐಎಂಐಎಂ ಮೈತ್ರಿಕೂಟವು ಈಗ ಹೊಸದಾಗಿ ಮೈತ್ರಿಕೊಂಡಿದೆ. ಸೋಮವಾರ ನಾಮನಿರ್ದೇಶಿತ ಕೌನ್ಸಿಲರ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಬಿಜೆಪಿ-ಎಐಎಂಐಎಂ ಮೈತ್ರಿ ಮಾಡಿಕೊಂಡಿದೆ.
ಆರಂಭದಲ್ಲಿ ತಾಜ್ ರಾಣಾ ಅವರನ್ನು ಎಐಎಂಐಎಂ ನಾಮನಿರ್ದೇಶಿತ ಕೌನ್ಸಿಲರ್ ಸ್ಥಾನಕ್ಕೆ ಪ್ರಸ್ತಾಪಿಸಿತ್ತು. ಆದರೆ ಮಾಜಿ ಪುರಸಭೆ ಅಧ್ಯಕ್ಷ ರಾಮಚಂದ್ರ ಬರೇಥಿಯಾ ಅವರ ಪುತ್ರ ಜಿತೇನ್ ಬರೇಥಿಯಾ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು. ತಾಜ್ ರಾಣಾ ಅವರ ನಾಮಪತ್ರವನ್ನು ತಿರಸ್ಕರಿಸಲಾಯಿತು. ಜಿತೇನ್ ಬರೇಥಿಯಾ ನಾಮನಿರ್ದೇಶಿತ ಕೌನ್ಸಿಲರ್ ಎಂದು ಘೋಷಿಸಲಾಯಿತು. ಈ ನಿರ್ಧಾರವನ್ನು ಪ್ರಶ್ನಿಸಲು ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸುತ್ತಿರುವುದಾಗಿ ತಾಜ್ ರಾಣಾ ಹೇಳಿದ್ದಾರೆ.
ನಾಮನಿರ್ದೇಶಿತ ಕೌನ್ಸಿಲರ್ ಆಯ್ಕೆಯ ನಂತರ, ಅಕೋಟ್‌ನಲ್ಲಿ ಬಿಜೆಪಿ-ಎಐಎಂಐಎಂ ಮೈತ್ರಿಯ ಬಗ್ಗೆ ರಾಜಕೀಯ ಚರ್ಚೆಗಳು ಮತ್ತೊಮ್ಮೆ ಭುಗಿಲೆದ್ದಿದೆ.
ಈ ಕುರಿತು ಅಕೋಲಾ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಾಜಿದ್ ಖಾನ್ ಪಠಾಣ್ ಪ್ರತಿಕ್ರಿಯಿಸಿ, ಎಐಎಂಐಎಂ ಬಿಜೆಪಿಯ ಬಿ ಟೀಮ್ ಎಂದು ನಾವು ಮತ್ತು ನಮ್ಮ ನಾಯಕರು ವರ್ಷಗಳಿಂದ ಹೇಳುತ್ತಲೇ ಇದ್ದೇವೆ. ಈಗ ನಡೆದಿರುವುದು ನಮ್ಮ ಮಾತನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.