×
Ad

ರಕ್ಷಣಾ ಯೋಜನೆಗಳ ವಿಳಂಬಕ್ಕೆ ವಾಯುಪಡೆ ಮುಖ್ಯಸ್ಥರ ಅಸಮಾಧಾನ

Update: 2025-05-29 21:51 IST

 ಮಾರ್ಶಲ್ ಅಮರ್ ಸಿಂಗ್ ಪ್ರೀತ್ | PTI 

ಹೊಸದಿಲ್ಲಿ: ಭಾರತೀಯ ರಕ್ಷಣಾ ಸಾಧನಗಳ ಪೂರೈಕೆಯಲ್ಲಿ ಗಣನೀಯ ವಿಳಂಬವುಂಟಾಗುತ್ತಿರುವ ಬಗ್ಗೆ ಭಾರತೀಯ ವಾಯುಪಡೆಯ ವರಿಷ್ಠ ಏರ್‌ಚೀಫ್ ಮಾರ್ಶಲ್ ಅಮರ್ ಸಿಂಗ್ ಪ್ರೀತ್ ಗುರುವಾರ ಬೆಳಕುಚೆಲ್ಲಿದ್ದಾರೆ. ತೇಜಸ್ ಎಕೆ1ಎ ಫೈಟರ್ ಜೆಟ್ ಯುದ್ಧವಿಮಾನ ಸೇರಿದಂತೆ ಯಾವುದೇ ಯೋಜನೆಗಳು ಕೂಡಾ ಸಕಾಲದಲ್ಲಿ ಸೇನೆಗೆ ಪೂರೈಕೆಯಾಗಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಪಡಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಸಿಐಐ ವಾರ್ಷಿಕ ಉದ್ಯಮ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಏರ್‌ಚೀಫ್ ಮಾರ್ಶಲ್ ಅವರು ರಕ್ಷಣಾ ಯೋಜನೆಗಳಲ್ಲಿ ಉಂಟಾಗಿರುವ ನಿರಂತರ ವಿಳಂಬಗಳಿಂದಾಗಿ, ಸೇನಾಪಡೆಗಳ ಕಾರ್ಯಾಚರಣಾ ಸನ್ನದ್ಧತೆಯ ಮೇಲೆ ಪರಿಣಾಮ ಬೀರಲಿದೆಯೆಂದು ಕಳವಳ ವ್ಯಕ್ತಪಡಿಸಿದರು.

ಯೋಜನೆಗಳ ಅನುಷ್ಠಾನದಲ್ಲಿ ವಿಳಂಬಗಳು ಪುನರಾವರ್ತಿಸುತ್ತಿರುವ ಬಗ್ಗೆಯೂ ಅಮರ್ ಪ್ರೀತ್ ಸಿಂಗ್ ಅವರು ತನ್ನ ಭಾಷಣದಲ್ಲಿ ಗಮನಸೆಳೆದರು. ಅವಾಸ್ತವಿಕವಾದ ಅಂತಿಮ ಗಡುವಿನೊಳಗೆ ಯೋಜನೆಗಳನ್ನು ಪೂರೈಸುವ ಬದ್ಧತೆಯನ್ನು ಉತ್ಪಾದಕರು ಪ್ರರ್ಶಿಸುತ್ತಿರುವುದನ್ನು ಕೂಡಾ ಅವರು ಟೀಕಿಸಿದರು.

ವಾಯುಪಡೆಗೆ ವಿಮಾನ ಪೂರೈಕೆ ಸೇರಿದಂತೆ ಹಲವಾರುಯೋಜನೆಗಳ ಸಮಯಮಿತಿಯೊಳಗೆ ಪೂರ್ಣಗೊಳ್ಳಲು ವಿಳಂಬವಾಗುತ್ತಿರುವ ಸವಾಲುಗಳನ್ನು ವಾಯುಪಡೆ ಎದುರಿಸುತ್ತಿರುವ ಸಮಯದಲ್ಲಿ ಅಮರ್ ಪ್ರೀತ್ ಸಿಂಗ್ ಅವರ ಈ ಹೇಳಿಕೆ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.

‘‘ನಿಗದಿಪಡಿಸಿದ ಸಮಯದೊಳಗೆ ಪೂರೈಕೆ ಮಾಡಲು ಸಾಧ್ಯವಿಲ್ಲವೆಂದರೆ ಯಾಕೆ ಆಶ್ವಾಸನೆ ನೀಡಬೇಕು. ಗುತ್ತಿಗೆಗೆ ಸಹಿಹಾಕುವ ಸಮಯದಲ್ಲಿ ಕೂಡಾ ಡೆಡ್‌ಲೈನ್ ಒಳಗೆ ಯೋಜನೆಯನ್ನು ಸಾಧಿಸಲು ಸಾಧ್ಯವಿಲ್ಲವೆಂದು ಅರಿವಿರುತ್ತದೆ. ಆದರೂ ಮುಂದುವರಿಯುತ್ತೇವೆ. ಈದರಿಂದಾಗಿ ಇಡೀ ಪ್ರಕ್ರಿಯೆಯ ಜೊತೆ ರಾಜಿ ಮಾಡಿಕೊಂಡಂತಾಗುತ್ತದೆ’’ ಎಂದು ಅಮರ್‌ಪ್ರೀತ್ ಸಿಂಗ್ ತಿಳಿಸಿದರು.

ರಕ್ಷಣಾ ವ್ಯವಸ್ಥೆಯ ಪೂರೈಕೆಯಲ್ಲಿ ಅದರಲ್ಲಿಯೂ ಸ್ವದೇಶಿ ಸಾಧನಗಳ ಅಭಿವೃದ್ಧಿಯಲ್ಲಿ ವಿಳಂಬಗಳಾದ ಹಲವಾರು ಪ್ರಕರಣಗಳ ಬಗ್ಗೆ ಏರ್ ಮಾರ್ಶಲ್ ಗಮನಸೆಳೆದಿದ್ದಾರೆ. ತೇಜಸ್ ಎಂಕೆ 1ಎ ಯುದ್ಧವಿಮಾನದ ಪೂರೈಕೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಜೊತೆ 48 ಸಾವಿರ ಕೋಟಿ ರೂ. ಮೊತ್ತದ ಗುತ್ತಿಗೆ ಒಪ್ಪಂದಕ್ಕೆ ಸಹಿಹಾಕಲಾಗಿದೆ.ಆದರೂ ಅದು ಇನ್ನೂ ಆರಂಭಗೊಂಡಿಲ್ಲ. ವಾಯುಪಡೆಗಾಗಿ ಆದೇಶಿಸಲಾದ 83 ವಿಮಾನಗಳ ಆರಂಭಿಕ ಹಂತದ ಪೂರೈಕೆ 2024ರ ಮಾರ್ಚ್‌ ನಲ್ಲಿ ಆರಂಭಗೊಳ್ಳಬೇಕಿತ್ತಾದರೂ, ಅವು ಇನ್ನು ಕೂಡಾ ಪೂರೈಕೆಯಾಗಿಲ್ಲವೆಂದು ಏರ್‌ಚೀಫ್ ಮಾರ್ಶಲ್ ಅಮರ್‌ಸಿಂಗ್ ಗಮನಸೆಳೆದರು.

ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News