ಪತ್ನಿಯನ್ನು ಜೀವಂತವಾಗಿ ದಹಿಸಿ ಹತ್ಯೆ: ಮಕ್ಕಳ ಮುಂದೆಯೇ ಘೋರ ಕೃತ್ಯವೆಸಗಿದ ಪತಿ ಪರಾರಿ
ಸಾಂದರ್ಭಿಕ ಚಿತ್ರ | Photo Credit : freepik.com
ಹೊಸದಿಲ್ಲಿ,ಡಿ.26: ಹೈದರಾಬಾದ್‌ನಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಮಕ್ಕಳ ಮುಂದೆಯೇ ಜೀವಂತವಾಗಿ ದಹಿಸಿದ ಭೀಭತ್ಸ ಘಟನೆ ಹೈದರಾಬಾದ್‌ನಲ್ಲಿ ಶುಕ್ರವಾರ ವರದಿಯಾಗಿದೆ. ಆತ ತನ್ನ ಪುತ್ರಿಯನ್ನು ಕೂಡಾ ಬೆಂಕಿಯ ಜ್ವಾಲೆಗೆ ದೂಡಿ ಪರಾರಿಯಾಗಿದ್ದಾನೆ. ನಗರದ ನಲ್ಲಕುಂಟಾ ಪ್ರದೇಶದಲ್ಲಿ ಬುಧವಾರ ಈ ಘೋರ ಘಟನೆ ನಡೆದಿದೆ.
ವೆಂಕಟೇಶ್ ಈ ಪಾತಕ ಕೃತ್ಯವನ್ನು ಎಸಗಿದ ಆರೋಪಿಯಾಗಿದ್ದು, ಆತ ತನ್ನ ಪತ್ನಿ ತ್ರಿವೇಣಿಯ ಚಾರಿತ್ರದ ಬಗ್ಗೆ ಶಂಕೆಗೊಂಡಿದ್ದ ಎನ್ನಲಾಗಿದೆ. ಈ ಕಾರಣಕ್ಕಾಗಿ ದಂಪತಿಯ ನಡುವೆ ಪದೇ ಪದೇ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 24ರಂದು , ತನ್ನ ಮಕ್ಕಳ ಮುಂದೆಯೇ ವೆಂಕಟೇಶ್ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದ. ಆನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಆಗ ಅವರ ಪುತ್ರಿಯು ತಾಯಿಯನ್ನು ರಕ್ಷಿಸಲು ಯತ್ನಿಸಿದಾಗ, ಆಕೆಯನ್ನು ಬೆಂಕಿಯ ಜ್ವಾಲೆಗೆ ದೂಡಿದ್ದ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ.
ಸ್ಥಳದಲ್ಲಿ ಆಕ್ರಂದನವನ್ನು ಕೇಳಿದ ನೆರೆಹೊರೆಯವರು ಸ್ಥಳಕ್ಕೆಧಾವಿಸಿದ್ದರು. ತೀವ್ರವಾಗಿ ಸುಟ್ಟ ಗಾಯಗಳಾಗಿದ್ದ ತ್ರಿವೇಣಿ ಸ್ಥಳದಲ್ಲೇ ಮೃತಪಟ್ಟಿದ್ದರು. ದಂಪತಿಯ ಆರು ವರ್ಷದ ಪುತ್ರಿ ಸಣ್ಣಪುಟ್ಟ ಸುಟ್ಟಗಾಯಗಳೊಂದಿಗೆ ಪಾರಾಗಿದ್ದಾಳೆ. ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೆಂಕಟೇಶ್ ಹಾಗೂ ತ್ರಿವೇಣಿ ಪ್ರೇಮವಿವಾಹವಾಗಿದ್ದು, ಅವರಿಗೆ ಓರ್ವ ಪುತ್ರಿ ಹಾಗೂ ಪುತ್ರನಿದ್ದಾರೆ.
ತನ್ನ ಪತ್ನಿಯ ಬಗ್ಗೆ ಸಂದೇಹವನ್ನು ಬೆಳೆಸಿಕೊಂಡ ವೆಂಕಟೇಶ್, ಆಕೆಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದ. ಆತನ ದೌರ್ಜನ್ಯವನ್ನು ಸಹಿಸಲು ಸಾಧ್ಯವಾಗದೆ ತ್ರಿವೇಣಿ, ಆಕೆಯ ಪಾಲಕರ ಮನೆಗೆ ತೆರಳಿದ್ದಳು. ಆದಾಗ್ಯೂ ವೆಂಕಟೇಶ್ ಕ್ಷಮೆಯಾಚಿಸಿದ್ದ ಮತ್ತು ಹಿರಿಯರ ಮಧ್ಯಸ್ಥಿಕೆಯಿಂದ ವಿವಾದವನ್ನು ಬಗೆಹರಿಸಿದ್ದರು. ಬಳಿಕ ವೆಂಕಟೇಶ್ ಮನೆಯನ್ನು ತೊರೆದಿದ್ದರೆ, ಜೀವನೋಪಾಯಕ್ಕಾಗಿ ತ್ರಿವೇಣಿ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಎರಡು ತಿಂಗಳುಗಳ ಬಳಿಕ ವೆಂಕಟೇಶ್ ಮನೆಗೆ ವಾಪಸಾಗಿದ್ದು,ಆತನ ಬಗ್ಗೆ ಎಚ್ಚರಿಕೆಯಿಂದಿರುವಂತೆಯೂ ತಾವು ತ್ರಿವೇಣಿಗೆ ಹೇಳಿದ್ದಾಗಿ ಲಕ್ಷ್ಮಿ ತಿಳಿಸಿದರು.
ಕೆಲವು ಸಮಯದ ಹಿಂದೆ ತ್ರಿವೇಣಿಯು ತನ್ನ ಪತಿಗೆ ಲಕ್ಷ ರೂ.ಮೌಲ್ಯದ ಬೈಕ್ ಕೊಡಿಸಿದ್ದಳು. ಮದ್ಯಪಾನ ವ್ಯಸನಿಯಾಗಿದ್ದ ಆತ ಅದನ್ನು ಕೇವಲ 15 ಸಾವಿರ ರೂ.ಗೆ ಮಾರಾಟ ಮಾಡಿದ್ದನೆಂದು ಅವರು ಹೇಳಿದ್ದಾರೆ.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ವೆಂಕಟೇಶ್‌ನನ್ನು ಸೆರೆಹಿಡಿಯಲು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.