×
Ad

ಬಾಲ ಪುರಸ್ಕಾರ ದೇಶದ ಎಲ್ಲಾ ಮಕ್ಕಳಿಗೂ ಸಾಧನೆಗೆ ಪ್ರೇರಣೆಯಾಗಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು

20 ಮಂದಿ ಮಕ್ಕಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ

Update: 2025-12-26 20:57 IST

ದ್ರೌಪದಿ ಮುರ್ಮು | Photo Credit : PTI 

ಹೊಸದಿಲ್ಲಿ,ಡಿ.26: ಶೌರ್ಯ, ಸಮಾಜಸೇವೆ, ಪರಿಸರ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಹಾಗೂ ವಿಜ್ಞಾನ,ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡಿದ 20 ಮಂದಿ ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ಚಿಣ್ಣರನ್ನು ಅಭಿನಂದಿಸಿ ಮಾತನಾಡಿದ ರಾಷ್ಟ್ರಪತಿಯವರು, ಈ ಮಕ್ಕಳು ಅವರ ಕುಟುಂಬಗಳಿಗೆ, ಸಮುದಾಯಗಳಿಗೆ ಹಾಗೂ ಇಡೀ ದೇಶಕ್ಕೆ ಹೆಮ್ಮೆಯನ್ನು ತಂದಿದ್ದಾರೆಂದು ಪ್ರಶಂಸಿಸಿದರು.

ಈ ಪ್ರಶಸ್ತಿಗಳು, ದೇಶಾದ್ಯಂತದ ಎಲ್ಲಾ ಮಕ್ಕಳಿಗೂ ಪ್ರೇರಣೆಯಾಗಲಿದೆಯೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು. ಡಿಸೆಂಬರ್ 26ರಂದು ಆಚರಿಸಲಾಗುವ ವೀರಬಾಲದಿವಸ್‌ನ ಮಹತ್ವದ ಬಗ್ಗೆ ಮಾತನಾಡಿದ ಅವರು, ಸುಮಾರು 320 ವರ್ಷಗಳ ಹಿಂದೆ ಸಿಖ್ಖರ 10ನೇ ಗುರುಗಳಾದ ಗುರುಗೋವಿಂದ ಸಿಂಗ್ ಜೀ ಹಾಗೂ ಅವರ ಇಬ್ಬರು ಮಕ್ಕಳು ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಾ ಪರಮೋನ್ನತ ಬಲಿದಾನವನ್ನು ಮಾಡಿದ್ದಾರೆಂದು ಹೇಳಿದರು. ಬಲಿದಾನಗೈದ ಗುರುಗೋವಿಂದ ಸಿಂಗ್ ಅವರ ಇಬ್ಬರು ಮಕ್ಕಳಾದ ಬಾಬಾ ರೆರಾವರ್‌ಸಿಂಗ್ ಹಾಗೂ ಬಾಬಾ ಫತೇಹ್ ಸಿಂಗ್ ಅವರು ಭಾರತ ಹಾಗೂ ವಿದೇಶದಲ್ಲೂ ಗೌರವಿಸಲ್ಪಡುತ್ತಿದ್ದಾರೆ ಎಂದರು.

ಮಕ್ಕಳು ದೇಶಭಕ್ತಿ ಹಾಗೂ ಉನ್ನತ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಆ ದೇಶವು ಮಹೋನ್ನತ ರಾಷ್ಟ್ರವಾಗುವುದು ನಿಶ್ಚಿತ ಎಂದು ಹೇಳಿದ ಅವರು ಶೌರ್ಯ, ಕಲೆ ಮತ್ತು ಸಂಸ್ಕೃತಿ, ವಿಜ್ಞಾನ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿ ಪುರಸ್ಕೃತ ಮಕ್ಕಳು ಪ್ರದರ್ಶಿಸಿದ ಸಾಧನೆಗೆ ಸಂತಸ ವ್ಯಕ್ತಪಡಿಸಿದರು.

2025ರ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ 20 ಮಕ್ಕಳು ಆಯ್ಕೆಯಾಗಿದ್ದರು.

ಪ್ರಶಸ್ತಿ ವಿಜೇತ ಮಕ್ಕಳು ಸಾಹಸ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ರಾಷ್ಟ್ರಪತಿ ತನ್ನ ಭಾಷಣದಲ್ಲಿ ಪ್ರಸ್ತಾವಿಸಿದರು. ಜಾಗತಿಕ ರಂಗದ ಚೆಸ್ ಕ್ರೀಡಾ ತಾರೆ ಏಳು ವರ್ಷದ ಬಾಲಕಿ ವಕ ಲಕ್ಷ್ಮಿ ಪ್ರಜ್ಞಿಕಾ, ತಮ್ಮ ಶೌರ್ಯ ಮತ್ತು ಬುದ್ಧಿಮತ್ತೆಯಿಂದ ಇತರರ ಪ್ರಾಣಗಳನ್ನು ರಕ್ಷಿಸಿದ ಅಜಯ್ ರಾಯ್ ಹಾಗೂ ಮೊಹಮ್ಮದ್ ಸಿಡಾನ್ ಪಿ. ಸೇರಿದಂತೆ ಸಾಧನೆಗೈದ ಮಕ್ಕಳು ಈ ಪ್ರಶಸ್ತಿ, ಪ್ರಶಂಸೆಗೆ ಅರ್ಹರಾಗಿದ್ದಾರೆ ಎಂದು ಮುರ್ಮು ಹೇಳಿದರು.

9 ವರ್ಷದ ಬಾಲಕಿ ವ್ಯೋಮ ಪ್ರಿಯಾ ಹಾಗೂ 11 ವರ್ಷದ ವೀರ ಬಾಲಕ ಕಮಲೇಶ್ ಕುಮಾರ್ ಅವರುಗಳು, ತಮ್ಮ ದಿಟ್ಟತನದೊಂದಿಗೆ ಇತರ ಪ್ರಾಣಗಳನ್ನು ರಕ್ಷಿಸುವಾಗ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಆಪರೇಶನ್ ಸಿಂಧೂರ್ ಸಂದರ್ಭದಲ್ಲಿ ಯುದ್ಧದ ಅಪಾಯಕಾರಿ ಸನ್ನಿವೇಶದಲ್ಲಿಯೂ ಹತ್ತು ವರ್ಷದ ಶ್ರವಣ್ ಸಿಂಗ್, ತನ್ನ ಮನೆಯ ಸಮೀಪ ಗಡಿಯಲ್ಲಿ ನಿಯೋಜಿತರಾದ ಸೈನಿಕರಿಗೆ ನೀರು, ಹಾಲು ಮತ್ತು ಮಜ್ಜಿಗೆಯನ್ನು ನಿಯಮಿತವಾಗಿ ಪೂರೈಕೆ ಮಾಡಿದ್ದಾನೆ. ಭಿನ್ನಸಾಮರ್ಥ್ಯದ ಶಿವಾನಿ ಹೊಸೂರು ಉಪ್ಪಾರ ತನ್ನ ಆರ್ಥಿಕ ಹಾಗೂ ದೈಹಿಕ ಸಾಮರ್ಥ್ಯದ ಇತಿಮಿತಿಗಳನ್ನು ಮೀರಿ ಕ್ರೀಡಾಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ್ದಾಳೆ.

ಹಲವು ದಾಖಲೆಗಳನ್ನು ನಿರ್ಮಿಸುವ ಮೂಲಕ ವೈಭವ ಸೂರ್ಯವಂಶಿ ಅತ್ಯಂತ ಸ್ಪರ್ಧಾತ್ಮಕ ಹಾಗೂ ಅಪಾರ ಪ್ರತಿಭೆಗಳಿಂದ ಕೂಡಿರುವ ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಆದ ಹೆಸರನ್ನು ಸ್ಥಾಪಿಸಿದ್ದಾನೆ ಎಂದು ಮುರ್ಮು ಅಭಿನಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News