ಅಹ್ಮದಾಬಾದ್ ದುರಂತದ ಬೆನ್ನಿಗೇ 900 ಅಡಿ ಕುಸಿದ ಇನ್ನೊಂದು ಏರ್ ಇಂಡಿಯಾ ವಿಮಾನ!
ಏರ್ ಇಂಡಿಯಾ | PC : PTI
ಹೊಸದಿಲ್ಲಿ: ಅಹ್ಮದಾಬಾದ್ ನಿಂದ ಲಂಡನ್ ಗೆ ಹೋಗುತ್ತಿದ್ದ ಏರ್ ಇಂಡಿಯಾದ ಎಐ171 ವಿಮಾನವು ಜೂನ್ 12ರಂದು ಪತನಗೊಂಡ ಕೇವಲ 38 ಗಂಟೆಗಳ ಬಳಿಕ, ದಿಲ್ಲಿಯಿಂದ ವಿಯೆನ್ನಾಗೆ ಹಾರುತ್ತಿದ್ದ ಇನ್ನೊಂದು ಏರ್ ಇಂಡಿಯಾ ವಿಮಾನ ಎಐ 187 ಗಂಭೀರ ತಾಂತ್ರಿಕ ಸಮಸ್ಯೆಯನ್ನು ಎದುರಿಸಿತ್ತು ಎನ್ನುವ ಸಂಗತಿ ತಡವಾಗಿ ವರದಿಯಾಗಿದೆ.
ವಿಮಾನವು ದಿಲ್ಲಿ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಬಳಿಕ, ಮೇಲೇರುತ್ತಿದ್ದಾಗ ಒಂದು ಹಂತದಲ್ಲಿ ಸುಮಾರು 900 ಅಡಿಯಷ್ಟು ಕುಸಿಯಿತು ಎನ್ನಲಾಗಿದೆ. ಆದರೂ, ಪೈಲಟ್ಗಳು ವಿಮಾನದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದರು ಹಾಗೂ ವಿಮಾನವು ಸುರಕ್ಷಿತವಾಗಿ ವಿಯನ್ನಾ ತಲುಪಿತು.
ವಿಮಾನವು 900 ಅಡಿ ಕುಸಿದಾಗ ಗ್ರೌಂಡ್ ಪ್ರಾಕ್ಸಿಮಿಟಿ ವಾರ್ನಿಂಗ್ ಸಿಸ್ಟಮ್ (ಜಿಪಿಡಬ್ಲ್ಯುಎಸ್) (ಅಂದರೆ, ವಿಮಾನ ಇನ್ನೂ ಕೆಳಗಿಳಿದರೆ ಅಪಾಯ) ಎಚ್ಚರಿಕೆಯನ್ನು ಹೊರಡಿಸಲಾಯಿತು.
ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಿದೆ. ಏರ್ ಇಂಡಿಯಾದ ಸುರಕ್ಷಾ ವಿಭಾಗದ ಮುಖ್ಯಸ್ಥರನ್ನು ವಿವರಣೆ ಪಡೆಯಲು ಕರೆಸಲಾಗಿದೆ ಮತ್ತು ತನಿಖೆ ಮುಗಿಯುವವರೆಗೆ ಇಬ್ಬರೂ ಪೈಲಟ್ಗಳನ್ನು ವಿಮಾನ ಹಾರಾಟದ ಕರ್ತವ್ಯದಿಂದ ಹೊರಗಿಡಲಾಗಿದೆ.
ಜೂನ್ 14ರ ಮುಂಜಾನೆ 2:56ಕ್ಕೆ, ಬಿರುಗಾಳಿ ಹವಾಮಾನ ಪರಿಸ್ಥಿತಿಯ ನಡುವೆಯೇ ಬೋಯಿಂಗ್ 777 ವಿಮಾನವು ದಿಲ್ಲಿಯಿಂದ ಹಾರಾಟ ಆರಂಭಿಸಿತು. ಆ ಸಮಯದಲ್ಲಿ ದಿಲ್ಲಿಯಲ್ಲಿ ಸಿಡಿಲು-ಮಿಂಚು-ಬಿರುಗಾಳಿಯಿಂದ ಕೂಡಿದ ಮಳೆ ಸುರಿಯುತ್ತಿತ್ತು. ‘‘ಹಾರಾಟ ಆರಂಭದ ಸ್ವಲ್ಪವೇ ಹೊತ್ತಿನ ಬಳಿಕ, ಜಿಪಿಡಬ್ಲ್ಯುಎಸ್ ಎಚ್ಚರಿಕೆ ಹೊರಟಿತು. ಒಮ್ಮೆ ವಿಮಾನ ಸ್ಥಗಿತಗೊಂಡಿದೆ ಎಂಬ ಎಚ್ಚರಿಕೆ ಹಾಗೂ ಎರಡು ಬಾರಿ ಜಿಪಿಡಬ್ಲ್ಯುಎಸ್ ಎಚ್ಚರಿಕೆ ಹೊರಹೊಮ್ಮಿತು. ವಿಮಾನವು ಮೇಲೇರುತ್ತಿದ್ದಾಗ ಒಮ್ಮೆಲೆ ಸುಮಾರು 900 ಅಡಿ ಕುಸಿಯಿತು. ಬಳಿಕ, ಪೈಲಟ್ಗಳು ವಿಮಾನದ ನಿಯಂತ್ರಣವನ್ನು ಮತ್ತೆ ತಮ್ಮ ವಶಕ್ಕೆ ತೆಗೆದುಕೊಂಡು ವಿಯೆನ್ನಾ ಪ್ರಯಾಣವನ್ನು ಮುಂದುವರಿಸಿದರು’’ ಎಂದು ಈ ಘಟನೆಯ ಬಗ್ಗೆ ಮಾಹಿತಿಯಿರುವ ಅಧಿಕಾರಿಗಳು ತಿಳಿಸಿದರು.
ಅಹ್ಮದಾಬಾದ್ನಲ್ಲಿ ಏರ್ ಇಂಡಿಯಾ ಎಐ171 ವಿಮಾನ ಪತನಗೊಂಡ ದುರಂತದಲ್ಲಿ, ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಸೇರಿದಂತೆ 260 ಮಂದಿ ಮೃತಪಟ್ಟಿದ್ದಾರೆ.