ವಿಯೆನ್ನಾದಲ್ಲಿ ತಾಂತ್ರಿಕ ದೋಷ ಕಂಡುಬಂದ ಬಳಿಕ ಏರ್ ಇಂಡಿಯಾದ ದಿಲ್ಲಿ-ವಾಷಿಂಗ್ಟನ್ ಯಾನ ರದ್ದು
ಏರ್ ಇಂಡಿಯಾ | PC : PTI
ಹೊಸದಿಲ್ಲಿ: ಏರ್ ಇಂಡಿಯಾದ ಸಂಕಷ್ಟಗಳಿಗೆ ಕೊನೆಯೇ ಇಲ್ಲದಂತಾಗಿದೆ. ಇತ್ತೀಚಿನ ಅಹ್ಮದಾಬಾದ್ ವಿಮಾನ ದುರಂತದ ಬಳಿಕ ವಿವಿಧ ಕಾರಣಗಳಿಂದಾಗಿ ತನ್ನ ಹಲವಾರು ಯಾನಗಳನ್ನು ರದ್ದುಗೊಳಿಸಿದ ಅದು ಈಗ ವಿಯೆನ್ನಾದಲ್ಲಿ ಇಂಧನ ನಿಲುಗಡೆ ಸಂದರ್ಭ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಬಳಿಕ ತನ್ನ ದಿಲ್ಲಿ-ವಾಷಿಂಗ್ಟನ್ ಯಾನ ಮತ್ತು ಮರುಪ್ರಯಾಣವನ್ನು ರದ್ದುಗೊಳಿಸಿದೆ.
ಜು.2ರಂದು ದಿಲ್ಲಿಯಿಂದ ನಿರ್ಗಮಿಸಿದ್ದ ವಿಮಾನವು ಅದೇ ದಿನ ವಾಷಿಂಗ್ಟನ್ ತಲುಪಬೇಕಿತ್ತು,ಆದರೆ ಇಂಧನ ನಿಲುಗಡೆಗಾಗಿ ವಿಯೆನ್ನಾದಲ್ಲಿ ಇಳಿದ ಸಂದರ್ಭ ಇಂಜಿನಿಯರ್ ಗಳು ತಾಂತ್ರಿಕ ದೋಷವನ್ನು ಪತ್ತೆ ಹಚ್ಚಿದ ಬಳಿಕ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿ, ಮುಂದಿನ ಯಾನವನ್ನು ರದ್ದುಗೊಳಿಸಲಾಯಿತು ಎಂದು ಏರ್ ಇಂಡಿಯಾ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ತೀವ್ರ ವಿಷಾದವನ್ನು ವ್ಯಕ್ತಪಡಿಸಿರುವ ಏರ್ ಇಂಡಿಯಾ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಸುರಕ್ಷತೆಗೆ ಆದ್ಯತೆ ನೀಡಲು ತಾನು ಬದ್ಧವಾಗಿದ್ದೇನೆ ಎಂದು ತಿಳಿಸಿದೆ.