×
Ad

ಪೈಲಟ್ ಗಳ ಲೋಪದ ಬಗ್ಗೆ ಎಎಐಬಿ ತನಿಖೆಯಲ್ಲಿ ಪಕ್ಷಪಾತ: ಪೈಲಟ್ ಗಳ ಸಂಘಟನೆಯ ಆರೋಪ

Update: 2025-07-12 21:48 IST

PC : PTI 

ಹೊಸದಿಲ್ಲಿ: ಜೂನ್ 12ರಂದು ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ದಳ ನೀಡಿರುವ ವರದಿಯ ಕುರಿತು ಪೈಲಟ್ ಗಳ ಸಂಘಟನೆಯಾದ ಭಾರತೀಯ ವಿಮಾನ ಪೈಲಟ್ ಗಳ ಸಂಘಟನೆ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.

ಈ ವರದಿಯು ಪೈಲಟ್ ಗಳ ಲೋಪದ ಬಗ್ಗೆ ಪಕ್ಷಪಾತ ಧ್ವನಿ ಮತ್ತು ದಿಕ್ಕನ್ನು ಹೊಂದಿದೆ ಎಂದು ಆಕ್ಷೇಪಿಸಿರುವ ವಿಮಾನ ಪೈಲಟ್ ಗಳ ಸಂಘಟನೆ, “ತನಿಖೆಯ ಧ್ವನಿ ಮತ್ತು ದಿಕ್ಕು ಪೈಲಟ್ ಗಳ ಲೋಪದ ಬಗ್ಗೆ ಪಕ್ಷಪಾತ ನಿಲುವು ಹೊಂದಿರುವುದನ್ನು ಸೂಚಿಸುತ್ತಿದೆ. ನಾವು ಈ ಅಂದಾಜನ್ನು ಅಕ್ಷರಶಃ ತಳ್ಳಿ ಹಾಕುತ್ತೇವೆ ಹಾಗೂ ನ್ಯಾಯಯುತ ಮತ್ತು ವಾಸ್ತವ ಆಧಾರಿತ ತನಿಖೆ ನಡೆಯಬೇಕು ಎಂದು ಒತ್ತಾಯಿಸುತ್ತೇವೆ” ಎಂದು ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಭಾರತೀಯ ವಿಮಾನ ಪೈಲಟ್ ಗಳ ಸಂಘಟನೆ, “ಯಾವುದೇ ಜವಾಬ್ದಾರಿಯುತ ಅಧಿಕಾರಿಯ ಸಹಿ ಅಥವಾ ಉಲ್ಲೇಖ ಹೊಂದಿರದೆ ಈ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆ. ತನಿಖೆಯು ಗೋಪ್ಯವಾಗಿ ಮುಂದುವರಿದಿರುವುದರಿಂದ, ತನಿಖೆಯ ಪಾರದರ್ಶಕತೆಯಲ್ಲಿ ಕೊರತೆಯಿದ್ದು, ಸಾರ್ವಜನಿಕ ವಿಶ್ವಾಸಾರ್ಹತೆ ಮತ್ತು ವಿಶ್ವಾಸವನ್ನು ಕಡೆಗಣಿಸಲಾಗಿದೆ. ಈಗಲೂ ಕೂಡಾ ತನಿಖಾ ತಂಡದಲ್ಲಿ ತಜ್ಞ, ಅನುಭವಿ ಸಿಬ್ಬಂದಿಗಳು, ವಿಶೇಷವಾಗಿ ಕಾರ್ಯನಿರತ ಪೈಲಟ್ ಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿಲ್ಲ” ಎಂದು ಆರೋಪಿಸಿದೆ.

ಎರಡೂ ಇಂಧನ ಪೂರೈಕೆ ಕಟ್ ಆಫ್ ಸ್ವಿಚ್ ಗಳು ಕೇವಲ ಮೂರು ಸೆಕೆಂಡ್ ಗಳ ಅವಧಿಯಲ್ಲಿ ಒಂದರ ನಂತರ ಒಂದು ರನ್ ಸ್ಥಿತಿಯಿಂದ ಕಟ್ ಆಫ್ ಸ್ಥಿತಿಗೆ ಮಾರ್ಪಾಡಾಗಿರುವುದರಿಂದ, ವಿಮಾನ ಮೇಲೇರುತ್ತಿದ್ದಂತೆಯೆ ಎರಡೂ ಇಂಜಿನ್ ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿದೆ ಎಂದು ಜೂನ್ 12ರಂದು ಸಂಭವಿಸಿದ್ದ ಅಹಮದಾಬಾದ್ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ದಳ ತನ್ನ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿತ್ತು.

ವಿಮಾನ ಅಪಘಾತ ತನಿಖಾ ದಳದ ವರದಿಯ ಪ್ರಕಾರ, ವಿಮಾನದ ಅವಶೇಷಗಳು ಅಂದಾಜು 1,000 ಅಡಿ ವ್ಯಾಪ್ತಿ ಪ್ರದೇಶ ಹಾಗೂ 400 ಅಡಿ ಎತ್ತರ ಹರಡಿಕೊಂಡಿತ್ತು ಎಂದು ಹೇಳಲಾಗಿದೆ.

ಕಾಕ್ ಪಿಟ್ ಧ್ವನಿ ಮುದ್ರಣದಲ್ಲಿ ಓರ್ವ ಪೈಲಟ್, ಮತ್ತೊಬ್ಬ ಪೈಲಟ್ ನನ್ನು “ಯಾಕೆ ನೀನು ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಿದೆ” ಎಂದು ಕೇಳುತ್ತಿದ್ದು, ಅದಕ್ಕೆ ಪ್ರತಿಯಾಗಿ, ಆ ಪೈಲಟ್, “ನಾನು ಹಾಗೆ ಮಾಡಿಲ್ಲ” ಎಂದು ಹೇಳುತ್ತಿರುವುದು ದಾಖಲಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News