ಏರ್ ಇಂಡಿಯಾದ 51 ಸುರಕ್ಷಾ ವೈಫಲ್ಯಗಳನ್ನು ಪತ್ತೆಹಚ್ಚಿದ ಡಿಜಿಸಿಎ
ಏರ್ ಇಂಡಿಯಾ | PC : @airindia
ಹೊಸದಿಲ್ಲಿ, ಜು. 29: ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ವು ತನ್ನ ಜುಲೈ ತಿಂಗಳ ಪರಿಶೋಧನೆಯಲ್ಲಿ, ಏರ್ ಇಂಡಿಯಾದ 51 ಸುರಕ್ಷಾ ವೈಫಲ್ಯಗಳನ್ನು ಪತ್ತೆಹಚ್ಚಿದೆ. ಕೆಲವು ಪೈಲಟ್ ಗಳಿಗೆ ಸರಿಯಾದ ತರಬೇತಿ ಇಲ್ಲದಿರುವುದು, ಅನುಮೋದಿತವಲ್ಲದ ಸಿಮ್ಯುಲೇಟರ್ ಗಳ ಬಳಕೆ ಮತ್ತು ಕಳಪೆ ರೋಸ್ಟರಿಂಗ್ ವ್ಯವಸ್ಥೆ- ಅವುಗಳಲ್ಲಿ ಕೆಲವು ಎಂಬುದಾಗಿ ಸರಕಾರದ ವರದಿಯೊಂದು ತಿಳಿಸಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಡಿಜಿಸಿಎಯ ವಾರ್ಷಿಕ ಪರಿಶೋಧನೆಯು ಕಳೆದ ತಿಂಗಳು ಅಹ್ಮದಾಬಾದ್ ನಲ್ಲಿ ನಡೆದ ಬೋಯಿಂಗ್ 787 ವಿಮಾನ ಅಪಘಾತಕ್ಕೆ ಸಂಬಂಧಿಸಿದ್ದಲ್ಲ. ಆದರೆ, ಅಪಘಾತದ ಬಳಿಕ ಏರ್ ಇಂಡಿಯಾವು ತನ್ನ ಸುರಕ್ಷಾ ಕ್ರಮಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದ ಬಳಿಕ ಈ ವರದಿ ಬಂದಿದೆ.
ಟಾಟಾ ಗುಂಪಿನ ಒಡೆತನದ ಏರ್ ಇಂಡಿಯಾವು, ತುರ್ತು ಪರಿಕರಗಳ ತಪಾಸಣೆ ನಡೆಸದೆಯೇ ವಿಮಾನಗಳನ್ನು ಹಾರಿಸುತ್ತದೆ, ಸಮಯಕ್ಕೆ ಸರಿಯಾಗಿ ಇಂಜಿನ್ ಬಿಡಿಭಾಗಗಳನ್ನು ಬದಲಾಯಿಸುವುದಿಲ್ಲ ಹಾಗೂ ಸಿಬ್ಬಂದಿ ದಣಿವು ನಿಭಾವಣೆಗೆ ಸಂಬಂಧಿಸಿದ ಲೋಪಗಳನ್ನು ಪರಿಹರಿಸುವುದಿಲ್ಲ ಎಂಬ ಆರೋಪಗಳನ್ನು ಈಗಾಗಲೇ ಎದುರಿಸುತ್ತಿದೆ.
ಹನ್ನೊಂದು ಪುಟಗಳ ಗೌಪ್ಯ ಪರಿಶೋಧನಾ ವರದಿಯು, ಜುಲೈ 30ರ ಮುನ್ನ ಸರಿಪಡಿಸಬೇಕಾದ ಪ್ರಮುಖ ‘‘ಲೆವೆಲ್ 1’’ ವೈಫಲ್ಯಗಳು, ಮತ್ತು ಆಗಸ್ಟ್ 23ರ ಒಳಗೆ ಸರಿಪಡಿಸಬೇಕಾದ 44 ಇತರ ವೈಫಲ್ಯಗಳನ್ನು ಪಟ್ಟಿ ಮಾಡಿದೆ.
ಏರ್ ಇಂಡಿಯಾದಲ್ಲಿ 34 ಬೋಯಿಂಗ್ 787 ಮತ್ತು 23 ಬೋಯಿಂಗ್ 777 ವಿಮಾನಗಳಿವೆ.
ಜೂನ್ 12ರಂದು ಅಹ್ಮದಾಬಾದ್ ನಿಂದ ಇಂಗ್ಲೆಂಡ್ ಗೆ ಹಾರುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನವು ಅಹ್ಮದಾಬಾದ್ ವಿಮಾನ ನಿಲ್ದಾಣದ ಹೊರಗೆ ವೈದ್ಯಕೀಯ ಕಾಲೇಜೊಂದರ ಹಾಸ್ಟೆಲ್ ಗೆ ಅಪ್ಪಳಿಸಿ ಸಂಭವಿಸಿದ ದುರಂತದಲ್ಲಿ ಸುಮಾರು 260 ಮಂದಿ ಮೃತಪಟ್ಟಿದ್ದಾರೆ.