×
Ad

ಬೋಯಿಂಗ್-787 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿ: ಏರ್ ಇಂಡಿಯಾಗೆ ಪೈಲಟ್ ಗಳ ಸಂಘಟನೆಯಿಂದ ಆಗ್ರಹ

Update: 2025-10-10 22:32 IST

 ಏರ್ ಇಂಡಿಯಾ | Photo Credit : PTI

ಹೊಸದಿಲ್ಲಿ: ಅಕ್ಟೋಬರ್ 9ರಂದು ವಿವಿಧ ವ್ಯವಸ್ಥೆಗಳಲ್ಲಿ ತಲೆದೋರಿದ ವೈಫಲ್ಯದಿಂದಾಗಿ ವಿಯೆನ್ನಾದಿಂದ ದಿಲ್ಲಿಗೆ ಆಗಮಿಸುತ್ತಿದ್ದ ಎಐ-154 ವಿಮಾನದ ಮಾರ್ಗವನ್ನು ದುಬೈಗೆ ಬದಲಿಸಿದ ಘಟನೆ ಹಾಗೂ ಅಕ್ಟೋಬರ್ 4ರಂದು ಎಐ-117 ವಿಮಾನ ಭೂಸ್ಪರ್ಶ ಮಾಡುವಾಗ ರ್ಯಾಮ್ ಏರ್ ಟರ್ಬೈನ್ ಅನ್ನು ನಿಯೋಜಿಸಲಾಗಿತ್ತು ಎಂಬ ವರದಿಗಳ ಆಧಾರದಲ್ಲಿ ಎಲ್ಲ ಬೋಯಿಂಗ್ 787 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಬೇಕು ಎಂದು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯನ್ನು ವಿಮಾನ ಪೈಲಟ್ ಗಳ ಸಂಘಟನೆಯಾದ ದಿ ಫೆಡರೇಷನ್ ಆಫ್ ಇಂಡಿಯನ್ ಪೈಲಟ್ಸ್ ಆಗ್ರಹಿಸಿದೆ.

ಈ ಘಟನೆಯು ಏರ್ ಇಂಡಿಯಾದ ಕಳಪೆ ನಿರ್ವಹಣೆ ಸಮಸ್ಯೆಯ ಸೂಚಕವಾಗಿದ್ದು, ಸರಕಾರಿ ಮಾಲಕತ್ವದ ಎಐಇಎಸ್ಇಎಲ್ ಬದಲಿಗೆ ಹೊಸದಾಗಿ ನೇಮಕ ಮಾಡಿಕೊಳ್ಳಲಾಗಿರುವ ಇಂಜಿನಿಯರ್ ಗಳ ಮೇಲೆ ಈ ದೂಷಣೆಯನ್ನು ಹೊರಿಸಲು ಪ್ರಯತ್ನಿಸುತ್ತಿರುವಂತೆ ಕಂಡು ಬರುತ್ತಿದೆ ಎಂದು ಪೈಲಟ್ ಗಳು ಆರೋಪಿಸಿದ್ದಾರೆ.

ಆದರೆ, ಎಐ-154 ವಿಮಾನದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವೈಫಲ್ಯವಾಗಿತ್ತು ಎಂಬ ಮಾತುಗಳನ್ನು ಏರ್ ಇಂಡಿಯಾ ಸಂಸ್ಥೆ ಸಾರಾಸಗಟಾಗಿ ತಳ್ಳಿ ಹಾಕಿದ್ದು, ಎಐ-117 ವಿಮಾನ ಭೂಸ್ಪರ್ಶ ಮಾಡುವಾಗ ರ್ಯಾಮ್ ಏರ್ ಟರ್ಬೈನ್ ನಿಯೋಜನೆಯಾಗಿರುವುದು ವೈವಸ್ಥೆಯ ದೋಷದಿಂದಾಗಲಿ ಅಥವಾ ಪೈಲಟ್ ಕ್ರಮದಿಂದಾಗಲಿ ಅಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಏರ್ ಇಂಡಿಯಾ ಸಂಸ್ಥೆಯ ವಕ್ತಾರರೊಬ್ಬರು, ತಾಂತ್ರಿಕ ಕಾರಣದಿಂದ ಎಐ-154 ವಿಮಾನದ ಮಾರ್ಗವನ್ನು ಬದಲಿಸಲಾಗಿದ್ದು, ಅದು ದುಬೈನಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ವಿಳಂಬದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದ್ದು, ಅವರಿಗೆ ಉಪಾಹಾರಗಳನ್ನು ಒದಗಿಸಲಾಗಿದೆ. ಮತ್ಯಾವುದೇ ಸಮಸ್ಯೆಗಳಿಲ್ಲದೆ ಶುಕ್ರವಾರ ಬೆಳಗ್ಗೆ ಅವರೆಲ್ಲ ಅದೇ ವಿಮಾನದಲ್ಲಿ ದಿಲ್ಲಿಗೆ ತಲುಪಿದ್ದಾರೆ ಎಂದು ತಿಳಿಸಿದ್ದಾರೆ.

“ಪ್ರಯಾಣಿಕರು ಹಾಗೂ ವಿಮಾನದ ಸಿಬ್ಬಂದಿಗಳ ಸುರಕ್ಷತೆ ಏರ್ ಇಂಡಿಯಾ ಸಂಸ್ಥೆಯ ಪ್ರಥಮ ಆದ್ಯತೆಯಾಗಿದೆ” ಎಂದೂ ಅವರು ಘೋಷಿಸಿದ್ದಾರೆ.

ನಿಯಮಗಳನುಸಾರ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗಿದ್ದು, ಆ ಬಳಿಕ ಎಐ-117 ವಿಮಾನದ ಹಾರಾಟ ಸೇವೆಗೆ ಅನುಮತಿ ನೀಡಲಾಗಿದೆ ಎಂದು ಏರ್ ಇಂಡಿಯಾ ಸಂಸ್ಥೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News