ದಿಲ್ಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ಮಾರ್ಗ ಬದಲಾವಣೆ
ಸಾಂದರ್ಭಿಕ ಚಿತ್ರ (PTI)
ಭೋಪಾಲ್: ದಿಲ್ಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ, ವಿಮಾನದ ಮಾರ್ಗವನ್ನು ಭೋಪಾಲ್ ಗೆ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
172 ಮಂದಿ ಪ್ರಯಾಣಿಕರಿದ್ದ ಈ ವಿಮಾನವನ್ನು ಸೋಮವಾರ ರಾತ್ರಿ ರಾಜಭೋಜ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣದ ನಿರ್ದೇಶಕ ರಾಮ್ ಜೀ ಅವಸ್ಥಿ, “ವಿಮಾನದ ಸರಕು ವಿಭಾಗದಲ್ಲಿ ದೋಷ ಕಂಡು ಬಂದ ನಂತರ, ಎಐಸಿ 2487, ಎ320 ನಿಯೋ, ವಿಟಿ-ಎಕ್ಸ್ಒ ಸಂಖ್ಯೆಯ ವಿಮಾನವನ್ನು ಭೋಪಾಲ್ ಗೆ ಮಾರ್ಗ ಬದಲಾವಣೆ ಮಾಡಲಾಯಿತು. ಇದರಿಂದ ಇತರೆ ಯಾವುದೇ ವಿಮಾನಗಳ ಕಾರ್ಯಾಚರಣೆಯ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗಿಲ್ಲ” ಎಂದು ತಿಳಿಸಿದ್ದಾರೆ.
“ತುರ್ತು ಸುರಕ್ಷತಾ ವಿಧಾನಗಳನ್ನು ಅನುಸರಿಸಿ ವಿಮಾನ ನಿಲ್ದಾಣದಲ್ಲಿ ತುರ್ತು ಸ್ಥಿತಿಯನ್ನು ಘೋಷಿಸಲಾಯಿತು. ಪ್ರಯಾಣಿಕರು ಸುರಕ್ಷಿತರಾಗಿರುವುದು ಕಂಡು ಬಂದ ನಂತರ, ಕೆಲವೇ ನಿಮಿಷಗಳಲ್ಲಿ ತುರ್ತು ಸ್ಥಿತಿಯನ್ನು ಹಿಂಪಡೆಯಲಾಯಿತು” ಎಂದು ಅವರು ಹೇಳಿದ್ದಾರೆ.