ತಾಂತ್ರಿಕ ದೋಷ: ಟೇಕಾಫ್ ಗೆ ಮುನ್ನ ರದ್ದಾದ ಏರ್ ಇಂಡಿಯಾ ವಿಮಾನ ಹಾರಾಟ
Air India PTI
ಹೊಸದಿಲ್ಲಿ: ಮಿಲನ್ನಿಂದ ದೆಹಲಿಗೆ ಹೊರಡಬೇಕಿದ್ದ ಏರ್ಇಂಡಿಯಾ ವಿಮಾನದಲ್ಲಿ ಟೇಕಾಫ್ಗೆ ಮುನ್ನ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ಹಾರಾಟ ರದ್ದುಪಡಿಸಿದ ಘಟನೆ ಶನಿವಾರ ಸಂಭವಿಸಿದೆ.
ಎಐ 138 ವಿಮಾನದ ಕರ್ತವ್ಯನಿರತ ಸಿಬ್ಬಂದಿ ಕಡ್ಡಾಯ ವಿಮಾನ ಕರ್ತವ್ಯ ಸಮಯದ ಮಿತಿಯೊಳಗೆ ತಲುಪದೇ ಇದ್ದುದು ಕೂಡಾ ರದ್ದತಿಗೆ ಕಾರಣ ಎಂದು ಹೇಳಲಾಗಿದೆ. ವಿಮಾನ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ವಿಮಾನ ಮುಂದುವರಿಸಲು ಸಿಬ್ಬಂದಿಗೆ ಅನುಮತಿ ಸಿಗಲಿಲ್ಲ.
ಪುಶ್ಬ್ಯಾಕ್ ವೇಳೆ ತಾಂತ್ರಿಕ ದೋಷ (ನಿರ್ವಹಣಾ ಕಾರ್ಯದ ಅಗತ್ಯತೆ) ಕಂಡುಬಂದ ಹಿನ್ನೆಲೆಯಲ್ಲಿ ಮತ್ತು ವಿಮಾನ ಸಿಬ್ಬಂದಿಯ ಕಡ್ಡಾಯ ವಿಮಾನ ಕರ್ತವ್ಯ ಸಮಯ ಮಿತಿ ನಿಯಮಾವಳಿಯಡಿಯಲ್ಲೂ ಆಗಸ್ಟ್ 16ರಂದು ಮಿಲನ್ನಿಂದ ದೆಹಲಿಗೆ ಬರಬೇಕಿದ್ದ ಎಐ138 ವಿಮಾನದ ಹಾರಾಟ ರದ್ದುಪಡಿಸಲಾಯಿತು" ಎಮದು ಏರ್ಇಂಡಿಯಾ ವಕ್ತಾರರು ಹೇಳಿಕೆ ನೀಡಿದ್ದಾರೆ.
ಆಗಸ್ಟ್ 16ರಂದು ಟೇಕಾಫ್ಗೆ ಮುನ್ನ ವಿಮಾನ ನಿರ್ಗಮನಕ್ಕೆ ಸಜ್ಜಾಗುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿತು ಎನ್ನಲಾಗಿದೆ.
ರದ್ದತಿಯಿಂದ ಪ್ರಯಾಣಿಕರಿಗೆ ಆದ ಅನಾನುಕೂಲತೆಗಳಿಗೆ ಏರ್ಇಂಡಿಯಾ ಪ್ರಾಮಾಣಿಕವಾಗಿ ವಿಷಾದಿಸುತ್ತಿದೆ. ಮಿಲನ್ನಲ್ಲಿರುವ ನಮ್ಮ ಸಿಬ್ಬಂದಿ ಎಲ್ಲ ಸಂತ್ರಸ್ತ ಪ್ರಯಾಣಿಕರಿಗೆ ನೆರವು ನೀಡಿ, ಹೋಟೆಲ್ ವಾಸ್ತವ್ಯಕ್ಕೆ ಮತ್ತು ಟಿಕೆಟ್ ರದ್ದತಿಗೆ ಸಂಪೂರ್ಣ ಮರುಪಾವತಿಗೆ ಮತ್ತು ಆಯ್ಕೆ ಮಾಡಿಕೊಂಡ ಪ್ರಯಾಣಿಕರಿಗೆ ವೇಳಾಪಟ್ಟಿ ಬದಲಿಸಿಕೊಳ್ಳುವ ನಿಟ್ಟಿನಲ್ಲಿ ಸಂಪೂರ್ಣ ಸಹಾಯ ನೀಡಿದರು" ಎಂದು ವಕ್ತಾರರು ವಿವರಿಸಿದ್ದಾರೆ.