ಕೆನಡಾ| ಪಾನಮತ್ತನಾಗಿ ಕರ್ತವ್ಯಕ್ಕೆ ಹಾಜರಾದ ಏರ್ ಇಂಡಿಯಾ ಪೈಲಟ್
ಏರ್ ಇಂಡಿಯಾ | Photo Credit : @airindia
ಹೊಸದಿಲ್ಲಿ: ವ್ಯಾಂಕೂವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾದ ಕ್ಯಾಪ್ಟನ್ ಓರ್ವರು ಪಾನಮತ್ತ ಸ್ಥಿತಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ಕೆನಡಾದ ಅಧಿಕಾರಿಗಳು ಆರೋಪಿಸಿದ್ದಾರೆ. ಇದು ಸುರಕ್ಷತಾ ತನಿಖೆ,ಪೈಲಟ್ ವಿರುದ್ಧ ಶಿಸ್ತುಕ್ರಮಕ್ಕೆ ನಾಂದಿ ಹಾಡಿದ್ದು, ವಾಯುಯಾನ ನಿಯಮಗಳ ಪಾಲನೆಯ ಕುರಿತು ಕಳವಳಕಾರಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಟ್ರಾನ್ಸ್‌ಪೋರ್ಟ್ ಕೆನಡಾದ ವಿದೇಶಿ ಕಾರ್ಯಾಚರಣೆಗಳ ವಿಭಾಗವು ಏರ್‌ಇಂಡಿಯಾಕ್ಕೆ ಕಳುಹಿಸಿರುವ ಔಪಚಾರಿಕ ಪತ್ರದ ಪ್ರಕಾರ, 2025,ಡಿ.23ರಂದು ಪೈಲಟ್ ಮದ್ಯ ಸೇವಿಸಿದ್ದನ್ನು ಎರಡು ಬ್ರೀಥ್‌ಲೈಸರ್ ಪರೀಕ್ಷೆಗಳು ದೃಢಪಡಿಸಿದ ಬಳಿಕ ಅವರು ಕರ್ತವ್ಯ ನಿರ್ವಹಿಸಲು ಅನರ್ಹರಾಗಿದ್ದಾರೆ ಎಂದು ಕಂಡುಬಂದಿತ್ತು. ಅದೇ ದಿನ ಪೈಲಟ್ ವ್ಯಾಂಕೂವರ್‌ನಿಂದ ವಿಯೆನ್ನಾಕ್ಕೆ ಏರ್ ಇಂಡಿಯಾದ ವಿಮಾನ ಯಾನ ಎಐ186ನ್ನು ನಿರ್ವಹಿಸಬೇಕಿತ್ತು.
ಪೈಲಟ್ ಫಿಟ್‌ನೆಸ್ ಬಗ್ಗೆ ಕಳವಳಗಳು ವ್ಯಕ್ತವಾದ ಬಳಿಕ ರಾಯಲ್ ಕೆನೆಡಿಯನ್ ಮೌಂಟೆಡ್ ಪೋಲಿಸರು (ಆರ್‌ಸಿಎಂಪಿ) ಮಧ್ಯಪ್ರವೇಶಿಸಿದ್ದರು. ಪೈಲಟ್ ಅನ್ನು ವಿಮಾನದಿಂದ ಕೆಳಗಿಳಿಸಿದ ಬಳಿಕ ಪೋಲಿಸರು ನಡೆಸಿದ ಎರಡು ಎರಡು ಬ್ರೀಥ್‌ಲೈಸರ್ ಪರೀಕ್ಷೆಗಳು ಅವರು ಮದ್ಯ ಸೇವಿಸಿದ್ದನ್ನು ದೃಢಪಡಿಸಿದ್ದವು ಎಂದು ಪತ್ರದಲ್ಲಿ ಹೇಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹಲವಾರು ವಾಯುಯಾನ ನಿಯಮಗಳ ಉಲ್ಲಂಘನೆಗಳನ್ನು ಕೆನಡಾದ ಅಧಿಕಾರಿಗಳು ಬೆಟ್ಟು ಮಾಡಿದ್ದಾರೆ. ಏರ್ ಇಂಡಿಯಾ ಮತ್ತು ಪೈಲಟ್ ಕೆನಡಾದ ವಾಯುಯಾನ ನಿಯಮಗಳು 602.02ನ್ನು ಹಾಗೂ ಪೈಲಟ್ 602.03ನ್ನು ಉಲ್ಲಂಘಿಸಿದ್ದರು. ಟ್ರಾನ್ಸ್‌ಪೋರ್ಟ್ ಕೆನಡಾ ಸಿವಿಲ್ ಏವಿಯೇಷನ್ (ಟಿಸಿಸಿಎ)ಏರ್ ಇಂಡಿಯಾಕ್ಕೆ ನೀಡಿದ ವಿದೇಶಿ ವಾಯುಯಾನ ನಿರ್ವಾಹಕ ಪ್ರಮಾಣಪತ್ರದಡಿ ಷರತ್ತನ್ನೂ (ಜಿ) ಉಲ್ಲಂಘಿಸಲಾಗಿತ್ತು ಎಂದು ಅದು ಪತ್ರದಲ್ಲಿ ಬೆಟ್ಟು ಮಾಡಲಾಗಿದೆ.
ಆರ್‌ಸಿಎಂಪಿ ಮತ್ತು ಟಿಸಿಸಿಎ ಶಿಸ್ತುಕ್ರಮವನ್ನು ಜರುಗಿಸುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಮಗ್ರ ಆಂತರಿಕ ತನಿಖೆಯನ್ನು ನಡೆಸುವಂತೆ ಏರ್ ಇಂಡಿಯಾಕ್ಕೆ ಸೂಚಿಸಿರುವ ಟಿಸಿಸಿಎ ಜ.26ರೊಳಗೆ ಪ್ರತಿಕ್ರಿಯಿಸುವಂತೆ ತಿಳಿಸಿದೆ.
ಪೈಲಟ್‌ನ್ನು ವಿಮಾನದಿಂದ ಕೆಳಗಿಳಿಸಿ ವಿಚಾರಣೆಗೆ ಕರೆದೊಯ್ಯಲಾಗಿದ್ದರಿಂದ ಏರ್ ಇಂಡಿಯಾ ಯಾನ ಕೊನೆಯ ಕ್ಷಣದಲ್ಲಿ ವಿಳಂಬಗೊಂಡಿತ್ತು. ಬಳಿಕ ಬದಲಿ ಪೈಲಟ್ ವ್ಯಾಂಕೂವರ್‌ನಿಂದ ವಿಯೆನ್ನಾಕ್ಕೆ ಯಾನವನ್ನು ನಿರ್ವಹಿಸಿದ್ದರು.
ಪ್ರಯಾಣಿಕರಿಗೆ ಆದ ಅನಾನುಕೂಲತೆಗೆ ಕ್ಷಮೆ ಯಾಚಿಸಿರುವ ಏರ್ ಇಂಡಿಯಾ,ವಿಚಾರಣೆ ಮುಗಿಯುವವರೆಗೂ ಸದ್ರಿ ಪೈಲಟ್‌ರನ್ನು ಹಾರಾಟ ಕರ್ತವ್ಯಗಳಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ.