ಗುಜರಾತ್: ವಿಮಾನ ಪತನಕ್ಕೂ ಮೊದಲು ಎಟಿಸಿಗೆ ತುರ್ತು ಕರೆ ಮಾಡಿದ್ದ ಪೈಲಟ್!
Photo credit: PTI
ಅಹ್ಮದಾಬಾದ್ : ಗುಜರಾತ್‌ನ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ವಿಮಾನ ಪತನಕ್ಕೂ ಮೊದಲು ವಾಯು ಸಂಚಾರ ನಿಯಂತ್ರಣ ಘಟಕ (ಎಟಿಸಿ)ಕ್ಕೆ ಅಪಾಯದ ಮುನ್ಸೂಚನೆಯಾಗಿ ಪೈಲಟ್ ತುರ್ತು ಕರೆ ಮಾಡಿದ್ದರು ಎಂದು ತಿಳಿದು ಬಂದಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಹೇಳಿಕೆ ಪ್ರಕಾರ, ವಿಮಾನದಲ್ಲಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಸಹ ಪೈಲಟ್ ಕ್ಲೈವ್ ಕುಂದರ್ ಅವರಿದ್ದರು. ಕ್ಯಾಪ್ಟನ್ ಸುಮೀತ್ ಅವರು 8,200 ಗಂಟೆಗಳ ಹಾರಾಟದ ಅನುಭವ ಹೊಂದಿರುವ ಲೈನ್ ಟ್ರೈನಿಂಗ್ ಕ್ಯಾಪ್ಟನ್ (LTC) ಆಗಿದ್ದರೆ, ಸಹ ಪೈಲಟ್ 1,100 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದಾರೆ.
ಗುರುವಾರ ಮಧ್ಯಾಹ್ನ 1.39ಕ್ಕೆ ರನ್‌ವೇ 23ರಿಂದ ವಿಮಾನ ಟೇಕ್ಆಫ್ ಆಗಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ವಾಯು ಸಂಚಾರ ನಿಯಂತ್ರಣ ಘಟಕ (ಎಟಿಸಿ)ಕ್ಕೆ ಅಪಯಾದ ಮುನ್ಸೂಚನೆಯಾಗಿ ಪೈಲಟ್ ತುರ್ತು ಕರೆ ಮಾಡಿದ್ದರು. ಪೈಲಟ್ ವಾಪಸ್ ಕರೆ ಮಾಡಿದರೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಡಿಜಿಸಿಎ ಹೇಳಿದೆ.