ಮಂಗೋಲಿಯಾದ ಉಲಾನ್ಬಟೋರ್ನಲ್ಲಿ ಸಿಲುಕಿದ್ದ 228 ಪ್ರಯಾಣಿಕರನ್ನು ದಿಲ್ಲಿಗೆ ಕರೆ ತಂದ ಏರ್ ಇಂಡಿಯಾ ವಿಮಾನ
Photo: Air India
ಹೊಸದಿಲ್ಲಿ, ನ. 5: ಮಂಗೋಲಿಯಾದ ರಾಜಧಾನಿ ಉಲಾನ್ಬಟೋರ್ನಲ್ಲಿ ಸಿಲುಕಿದ್ದ 228 ಪ್ರಯಾಣಿಕರನ್ನು ಏರ್ ಇಂಡಿಯಾ ವಿಮಾನ ಬುಧವಾರ ಬೆಳಗ್ಗೆ ದಿಲ್ಲಿಗೆ ಕರೆದುಕೊಂಡು ಬಂದಿದೆ.
ಸ್ಯಾನ್ಫ್ರಾನ್ಸಿಸ್ಕೊ - ದಿಲ್ಲಿ ವಿಮಾನವನ್ನು ತಾಂತ್ರಿಕ ದೋಷದಿಂದ ಸೋಮವಾರ ಉಲಾನ್ಬಟೋರ್ಗೆ ಪಥ ಬದಲಾಯಿಸಿದ ಬಳಿಕ ಪ್ರಯಾಣಿಕರು ಉಲಾನ್ಬಟೋರ್ನಲ್ಲಿ ಸಿಲುಕಿಕೊಂಡಿದ್ದರು.
ಉಲಾನ್ಬಟೋರ್ನಿಂದ ಪ್ರಯಾಣಿಕರನ್ನು ಕರೆದುಕೊಂಡು ಬಂದ ಏರ್ ಇಂಡಿಯಾ ಬದಲಿ ವಿಮಾನ ದಿಲ್ಲಿಯಲ್ಲಿ ಬುಧವಾರ ಬೆಳಗ್ಗೆ 8.24 ಗಂಟೆಗೆ ಬಂದಿಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೋಯಿಂಗ್ 787 ಡ್ರೀಮ್ಲೈನರ್ ನಿರ್ವಹಿಸುತ್ತಿರುವ ಬದಲಿ ವಿಮಾನ ಎಐ 183 ಉಲಾನ್ಬಟೋರ್ನಿಂದ ಮಂಗಳವಾರ ಅಪರಾಹ್ನ ಟೇಕ್ ಆಫ್ ಆಗಿತ್ತು.
ಉಲಾನ್ಬಟೋರ್ಗೆ ಪಥ ಬದಲಿಸಲಾದ ಬೋಯಿಂಗ್ 777ರಲ್ಲಿ 228 ಪ್ರಯಾಣಿಕರು ಹಾಗೂ 17 ಸಿಬ್ಬಂದಿ ಸೇರಿದಂತೆ ಒಟ್ಟು 245 ಮಂದಿಯಿದ್ದರು ಎಂದು ಮೂಲಗಳು ಸೋಮವಾರ ತಿಳಿಸಿವೆ.
ಮುನ್ನೆಚ್ಚರಿಕೆಯ ಪಥ ಬದಲಾವಣೆಯ ಬಳಿಕ ಮಂಗೋಲಿಯಾದ ಉಲನ್ಬಟೋರ್ನಲ್ಲಿ ಸಿಲುಕಿಕೊಂಡಿದ್ದ ಎಐ 174 ವಿಮಾನದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತ ಬದಲಿ ವಿಮಾನ ಇಂದು ಬೆಳಗ್ಗೆ ದಿಲ್ಲಿಯಲ್ಲಿ ಬಂದಿಳಿಯಿತು ಎಂದು ಏರ್ಲೈನ್ಸ್ ಬುಧವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.
ಪಥ ಬದಲಾವಣೆ ಸಂದರ್ಭ ತಾಳ್ಮೆಯಿಂದಿದ್ದ ಹಾಗೂ ಸಮಸ್ಯೆಯನ್ನು ಅರ್ಥ ಮಾಡಿಕೊಂಡ ಪ್ರಯಾಣಿಕರು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಏರ್ ಇಂಡಿಯಾ ಕೃತಜ್ಞತೆ ಸಲ್ಲಿಸಿದೆ.
‘‘ಸಂಚಾರದ ಸಂದರ್ಭ ತಾಂತ್ರಿಕ ದೋಷದ ಬಗ್ಗೆ ವಿಮಾನದ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ ಬಳಿಕ ಸ್ಯಾನ್ಫ್ರಾನ್ಸಿಸ್ಕೊದಿಂದ ಕೋಲ್ಕತ್ತಾ ಮೂಲಕ ದಿಲ್ಲಿಗೆ ಸಂಚರಿಸುತ್ತಿದ್ದ ಎಐ 474 ವಿಮಾನವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಉಲಾನ್ಬಟೋರ್ನಲ್ಲಿ ಇಳಿಸಲಾಯಿತು’’ ಎಂದು ಟಾಟಾ ಸಮೂಹ ಮಾಲಕತ್ವದ ವಿಮಾನ ಯಾನ ಸಂಸ್ಥೆ ಸೋಮವಾರ ಹೇಳಿತ್ತು.