ಉತ್ತರ ಭಾರತದಲ್ಲಿ ಮತ್ತೆ ಹಿಮಪಾತ, ಭಾರೀ ಮಳೆ ನಿರೀಕ್ಷೆ
PC: x.com/News9Tweets
ಹೊಸದಿಲ್ಲಿ: ಹಿಮಾಲಯನ್ ಪ್ರದೇಶದಲ್ಲಿ ಶನಿವಾರ ಹೊಸದಾಗಿ ಸಂಭವಿಸಿರುವ ಪಶ್ಚಿಮ ಪ್ರಕ್ಷುಬ್ಧತೆಯ ಪರಿಣಾಮ ಫೆಬ್ರವರಿ 1ರಂದು ಭಾರಿ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಗಳಿವೆ ಎಂದು ಭಾರತದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಯವ್ಯ ಭಾರತ ಮತ್ತು ಈ ಭಾಗಕ್ಕೆ ಹೊಂದಿಕೊಂಡಿರುವ ಕೇಂದ್ರ ಭಾರತ ಪ್ರದೇಶಗಳಲ್ಲಿ ಶನಿವಾರದಿಂದ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದೆ.
ಏತನ್ಮಧ್ಯೆ ವಾಯವ್ಯ ಭಾರತದಲ್ಲಿ ಮತ್ತು ಹೊಂದಿಕೊಂಡಿರುವ ಕೇಂದ್ರೀಯ ಭಾರತದಲ್ಲಿ ಮತ್ತು ಪೂರ್ವಭಾರತದಲ್ಲಿ ಫೆಬ್ರವರಿ 2ರವರೆಗೆದಟ್ಟ ಮಂಜು ಮುಸುಕಿದ ವಾತಾವರಣದ ಸಾಧ್ಯತೆ ಇದೆ ಎಂದೂ ಹೇಳಿದೆ.
"ಹೊಸದಾಗಿ ಸಂಭವಿಸಿರುವ ಪಶ್ಚಿಮಮುಖಿ ಪ್ರಕ್ಷುಬ್ಧತೆಯು ಪಶ್ಚಿಮ ಹಿಮಾಲಯ ಪ್ರದೇಶದ ಮೇಲೆ ಜನವರಿ 31ರಿಂದ ಫೆಬ್ರವರಿ 2ರವರೆಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಫೆಬ್ರವರಿ 1ರಂದು ಭಾರಿ ಮಳೆ/ ಹಿಮಪಾತವಾಗುವ ನಿರೀಕ್ಷೆ ಇದೆ. ವಾಯವ್ಯ ಭಾರತ ಮತ್ತು ಸುತ್ತಮುತ್ತಲಿನ ಕೇಂದ್ರ ಭಾರತದಲ್ಲಿ ಜನವರಿ 31ರಿಂದ ಫೆಬ್ರುವರಿ 2ರವರೆಗೆ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ" ಎಂದು ಪ್ರಕಟಣೆ ಹೇಳಿದೆ.
ದೆಹಲಿಯಲ್ಲಿ ಭಾಗಶಃ ಮೋಡ ಮುಸುಕಿದ ವಾತಾವರಣ ಇರಲಿದೆ. ಹಲವು ಪ್ರದೇಶಗಳಲ್ಲಿ ಮಂಜು ಕವಿಯಲಿದೆ. ಗರಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಷಿಯಸ್ ನಿಂದ 19 ಡಿಗ್ರಿ ಹಾಗೂ ಕನಿಷ್ಠ ತಾಪಮಾನ 6 ಡಿಗ್ರಿ ಸೆಲ್ಷಿಯಸ್ ನಿಂದ 8 ಡಿಗ್ರಿ ಆಸುಪಾಸಿನಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.