×
Ad

ಮಹಾರಾಷ್ಟ್ರ: ಒಂದನೆ ತರಗತಿಯಿಂದ ಹಿಂದಿ ಕಡ್ಡಾಯ ಮಾಡುವುದಕ್ಕೆ ಅಜಿತ್ ಪವಾರ್ ಅಸಮ್ಮತಿ

Update: 2025-06-29 12:04 IST

ಅಜಿತ್ ಪವಾರ್ (PTI)

ಮುಂಬೈ: ಮಹಾರಾಷ್ಟ್ರದಲ್ಲಿ ಭುಗಿಲೆದ್ದಿರುವ ತ್ರಿಭಾಷಾ ಸೂತ್ರ ವಿವಾದದ ಬೆನ್ನಿಗೇ, ಮಹತ್ವದ ಬೆಳವಣಿಗೆಯೊಂದರಲ್ಲಿ “ನಾನು ಒಂದನೆ ತರಗತಿಯಿಂದ ಹಿಂದಿಯನ್ನು ಕಡ್ಡಾಯ ಮಾಡುವುದರ ಪರವಿಲ್ಲ” ಎಂದು ಘೋಷಿಸಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಆದರೆ, ಐದನೆ ತರಗತಿಯಲ್ಲಿ ಮೂರನೆ ಭಾಷೆ ಕಲಿಕೆ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರ ಮಾನ್ಸೂನ್ ವಿಧಾನಸಭಾ ಅಧಿವೇಶನದ ಪ್ರಾರಂಭಕ್ಕೂ ಹಿಂದಿನ ದಿನ ಅಜಿತ್ ಪವಾರ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ.

ಆದರೆ, ಒಂದನೆ ತರಗತಿಯಿಂದಲೇ ಹಿಂದಿಯನ್ನು ಕಲಿಯಬೇಕು ಎಂಬ ಕುರಿತು ಯಾವುದೇ ಒತ್ತಡವಿಲ್ಲ ಎಂದೂ ಸ್ಪಷ್ಟನೆ ನೀಡಿರುವ ಅವರು, “ಆರಂಭದಿಂದಲೇ ಹಿಂದಿಯನ್ನು ಹೇರಿಕೆ ಮಾಡಬೇಕು ಎಂಬ ಅಭಿಪ್ರಾಯವನ್ನು ನಾವು ಎಂದೂ ಹೊಂದಿಲ್ಲ” ಎಂದೂ ಹೇಳಿದ್ದಾರೆ.

“ಹಿಂದಿ ಕಲಿಕೆಯ ಬಗ್ಗೆ ಯಾವುದೇ ಒತ್ತಡವಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ರಾಜ್ಯಗಳಲ್ಲಿ ತಮ್ಮ ಮಾತೃಭಾಷೆಯನ್ನು ಕಲಿಯಲೇಬೇಕು ಎಂಬುದು ನಮ್ಮ ಅನಿಸಿಕೆಯಾಗಿದೆ. ಐದನೆ ತರಗತಿಯಿಂದ ಹಿಂದಿ ಕಲಿಯುವ ಕುರಿತು ಯಾರಾದರೂ ಯೋಚಿಸಬಹುದು ಎಂದು ನಾವು ಹೇಳಿದ್ದೆವು. ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಮರಾಠಿ ಕಡ್ಡಾಯ ಭಾಷೆಯಾಗಿರುವುದರಿಂದ ಅದನ್ನು ಕಲಿಯಲೇಬೇಕು. ಹಿಂದಿ ಕಲಿಕೆಯ ಕುರಿತು ಐದನೆ ತರಗತಿಯಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ನಿರ್ಧರಿಸಬೇಕು” ಎಂದು ಅಜಿತ್ ಪವಾರ್ ಸಲಹೆ ನೀಡಿದ್ದಾರೆ.

ಸೋಮವಾರದಿಂದ ಪ್ರಾರಂಭಗೊಳ್ಳಲಿರುವ ರಾಜ್ಯ ವಿಧಾನಸಭಾ ಅಧಿವೇಶನಕ್ಕೂ ಮುನ್ನ, ರವಿವಾರ ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಹಿಂದಿ ಹೇರಿಕೆಯ ವಿರುದ್ಧ ಜುಲೈ 5ರಂದು ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ನೇತೃತ್ವದಲ್ಲಿ ಮುಂಬೈನಲ್ಲಿ ಪ್ರತಿಭಟನಾ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಅಜಿತ್ ಪವಾರ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News