ʼಅಕ್ಬರ್-ಸೀತಾʼ ಸಿಂಹಗಳ ನಾಮಕರಣ ವಿವಾದ: ಉನ್ನತ ಅಧಿಕಾರಿಯನ್ನು ಅಮಾನತುಗೊಳಿಸಿದ ತ್ರಿಪುರಾ ಸರಕಾರ
ಸಾಂದರ್ಭಿಕ ಚಿತ್ರ (Credit: ANI)
ಅಗರ್ತಲ: ಮೃಗಾಲಯದ ಸಿಂಹ ಹಾಗೂ ಸಿಂಹಿಣಿಗೆ ಅಕ್ಬರ್-ಸೀತಾ ಎಂದು ನಾಮಕರಣ ಮಾಡಿದ್ದರ ಸುತ್ತ ಸೃಷ್ಟಿಯಾಗಿರುವ ವಿವಾದದ ಹಿನ್ನೆಲೆಯಲ್ಲಿ ತ್ರಿಪುರಾ ಸರಕಾರವು ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಹಾಗೂ ಪರಿಸರ ಪ್ರವಾಸೋದ್ಯಮ) ಪ್ರಬಿನ್ ಲಾಲ್ ಅಗರ್ವಾಲ್‌ರನ್ನು ಅಮಾನತುಗೊಳಿಸಿದೆ.
ಸಿಂಹ ಹಾಗೂ ಸಿಂಹಿಣಿಗೆ ಮಾಡಿರುವ ನಾಮಕರಣವು ಧಾರ್ಮಿಕ ಭಾವನೆಗಳಿಗೆ ಘಾಸಿಯನ್ನುಂಟು ಮಾಡುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಕಲ್ಕತ್ತಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಈ ಸಿಂಹಗಳು ಫೆಬ್ರವರಿ 12ರಂದು ಸೆಫಾಜಿಲ ಮೃಗಾಲಯದಿಂದ ಉತ್ತರ ಬಂಗಾಳದ ಸಿಲಿಗಿರಿಯಲ್ಲಿರುವ ವನ್ಯಜೀವಿ ಧಾಮಕ್ಕೆ ಆಗಮಿಸಿದ್ದವು.
ಈ ಸಿಂಹಗಳಿಗೆ ತ್ರಿಪುರಾದ ಸೆಫಾಜಿಲ ಮೃಗಾಲಯದಲ್ಲಿ ನಾಮಕರಣ ಮಾಡಲಾಗಿತ್ತು ಹಾಗೂ ಪ್ರಾಣಿ ವಿನಿಮಯ ಕಾರ್ಯಕ್ರಮದ ಭಾಗವಾಗಿ ಈ ಸಿಂಹಗಳನ್ನು ಸಿಲಿಗುರಿಗೆ ಕರೆ ತರಲಾಗಿತ್ತು ಎಂದು ಪ್ರಾಧಿಕಾರಗಳು ಪ್ರತಿಪಾದಿಸಿವೆ. ಈ ಸಿಂಹಗಳಿಗೆ ಮರು ನಾಮರಣ ಮಾಡಲು ಉತ್ತರ ಬಂಗಾಳದ ವನ್ಯಜೀವಿ ಧಾಮದ ಅಧಿಕಾರಿಗಳು ಯೋಜಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಭಟ್ಟಾಚಾರ್ಯ ಸಿಂಹ ಮತ್ತು ಸಿಂಹಿಣಿಗೆ ಮಾಡಿರುವ ನಾಮಕರಣದ ಕುರಿತು ಅಸಮ್ಮತಿ ವ್ಯಕ್ತಪಡಿದ್ದರು.