ನೋಂದಣಿ ಮಾಡದಿದ್ದರೆ ವಿವಾಹ ಅನೂರ್ಜಿತವಲ್ಲ: ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ ಹೈಕೋರ್ಟ್ | PC : PTI
ಪ್ರಯಾಗ್ ರಾಜ್: ವಿವಾಹ ನೋಂದಣಿಯ ಮಾಡದಿದ್ದರೆ ವಿವಾಹ ಅನೂರ್ಜಿತವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ರಾಜ್ಯ ಸರಕಾರಗಳು ವಿವಾಹ ನೋಂದಣಿಯ ನಿಯಮಗಳನ್ನು ರೂಪಿಸುವ ಅಧಿಕಾರ ಹೊಂದಿದ್ದರೂ, ಇಂತಹ ನೋಂದಣಿಗಳು ವಿವಾಹಕ್ಕೆ ಕೇವಲ ಅನುಕೂಲಕರ ಪುರಾವೆ ಒದಗಿಸುವ ದಾಖಲೆಗಳು ಮಾತ್ರ ಆಗುತ್ತವೆ ಎಂದು ಆಗಸ್ಟ್ 26ರಂದು ನೀಡಿರುವ ತೀರ್ಪಿನಲ್ಲಿ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಅರ್ಜಿದಾರ ಪತಿ ಹಾಗೂ ಪ್ರತಿವಾದಿ ಪತ್ನಿಯು ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್ 13 (ಬಿ) ಅಡಿ ಪರಸ್ಪರ ಸಮ್ಮತಿಯ ಮೇರೆಗೆ ಅಕ್ಟೋಬರ್ 23, 2024ರಂದು ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಬಾಕಿ ಇರುವಾಗ, ಜುಲೈ 29, 2025ರೊಳಗೆ ದಂಪತಿಗಳು ತಮ್ಮ ವಿವಾಹ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಜುಲೈ 4, 2025ರ ಆದೇಶದಲ್ಲಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಸೂಚಿಸಿದ್ದರು.
ಇಬ್ಬರ ಬಳಿಯೂ ವಿವಾಹ ನೋಂದಣಿ ಪ್ರಮಾಣ ಪತ್ರವಿಲ್ಲ ಹಾಗೂ ಹಿಂದೂ ವಿವಾಹ ಕಾಯ್ದೆ, 1955ರ ಅಡಿ ವಿವಾಹ ನೋಂದಣಿಯಾಗುವುದು ಕಡ್ಡಾಯವಲ್ಲ. ಹೀಗಾಗಿ ಅರ್ಜಿದಾರರಿಗೆ ವಿವಾಹ ನೋಂದಣಿ ಪ್ರಮಾಣ ಪತ್ರ ಸಲ್ಲಿಸುವುದರಿಂದ ವಿನಾಯಿತಿ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಮನವಿಗೆ ಉಭಯ ವಾದಿಗಳೂ ಬೆಂಬಲ ವ್ಯಕ್ತಪಡಿಸಿದ್ದರು.
ಆದರೆ, ಜುಲೈ 31, 2025ರ ತನ್ನ ಆದೇಶದಲ್ಲಿ ಈ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಅಲಹಾಬಾದ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಮನೀಶ್ ನಿಗಮ್, ಅಝಂಗಢ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಬದಿಗಿರಿಸಿ, ದಂಪತಿಗಳು ವಿವಾಹ ನೋಂದಣಿ ಪ್ರಮಾಣ ಪತ್ರ ಸಲ್ಲಿಸುವುದರಿಂದ ವಿನಾಯಿತಿ ನೀಡಿದರು.
ಸುನೀಲ್ ದುಬೆ ಎಂಬುವವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾ. ಮನೀಶ್ ನಿಗಮ್, “ಹಿಂದೂ ವಿವಾಹ ಕಾಯ್ದೆ, 1955ರ ಅಡಿ ಹಿಂದೂ ವಿವಾಹಗಳನ್ನು ಮಾನ್ಯಗೊಳಿಸಲಾಗಿದೆ. ಇಂತಹ ವಿವಾಹಗಳಿಗೆ ಪುರಾವೆ ಒದಗಿಸಲು ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್ 8 (1)ರ ಅಡಿ ವಿವಾಹಗಳನ್ನು ನೋಂದಣಿಗೊಳಿಸಲು ನಿಯಮಗಳನ್ನು ರೂಪಿಸುವ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಲಾಗಿದೆ” ಎಂದು ಅಭಿಪ್ರಾಯ ಪಟ್ಟರು.