273.5 ಕೋಟಿ ರೂ. ಜಿಎಸ್‌ಟಿ ದಂಡ ಪ್ರಶ್ನಿಸಿ ಪತಂಜಲಿ ಆಯುರ್ವೇದ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್
ಯೋಗಗುರು ರಾಮ್‌ದೇವ್ (PTI)
ಪ್ರಯಾಗ್ ರಾಜ್: ತನಗೆ ವಿಧಿಸಲಾಗಿದ್ದ 273.5 ಕೋಟಿ ರೂ. ಜಿಎಸ್‌ಟಿ ದಂಡವನ್ನು ಪ್ರಶ್ನಿಸಿ ಪತಂಜಲಿ ಆಯುರ್ವೇದ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ಇಂತಹ ದಂಡಗಳು ಕ್ರಿಮಿನಲ್ ಬಾಧ್ಯತೆಗಳನ್ನು ಒಳಗೊಂಡಿರುತ್ತವೆ ಹಾಗೂ ಈ ಸಂಬಂಧ ಕ್ರಿಮಿನಲ್ ವಿಚಾರಣೆ ನಡೆದ ನಂತರವಷ್ಟೇ ಇಂತಹ ದಂಡಗಳನ್ನು ವಿಧಿಸಲು ಸಾಧ್ಯ ಎಂಬ ಪತಂಜಲಿ ಆಯುರ್ವೇದ್ ಲಿಮಿಟೆಡ್‌ನ ವಾದವನ್ನು ನ್ಯಾ. ಶೇಖರ್ ಬಿ. ಸರಾಫ್ ಹಾಗೂ ನ್ಯಾ. ವಿಪಿನ್ ಚಂದ್ರ ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ತಳ್ಳಿ ಹಾಕಿತು.
ಜಿಎಸ್‌ಟಿ ದಂಡಗಳ ವಿಚಾರಣೆ ಸಿವಿಲ್ ಸ್ವರೂಪದ್ದಾಗಿದ್ದು, ಇವನ್ನು ಸೂಕ್ತ ಅಧಿಕಾರಿಗಳು ತೀರ್ಮಾನಿಸಬಹುದಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
"ಈ ಸಂಬಂಧ ವಿಸ್ತೃತ ವಿಶ್ಲೇಷಣೆ ನಡೆಸಿದ ನಂತರ, ಸಿಜಿಎಸ್‌ಟಿ ಕಾಯ್ದೆಯ ಸೆಕ್ಷನ್ 122ರ ಅಡಿ ದಂಡದ ವಿಚಾರಣೆಯನ್ನು ಸೂಕ್ತ ತೀರ್ಮಾನ ಕೈಗೊಳ್ಳುವ ಅಧಿಕಾರವಿರುವ ಅಧಿಕಾರಿಯೊಬ್ಬರು ದಂಡ ವಿಧಿಸುವ ತೀರ್ಪು ನೀಡಬಹುದಾಗಿದೆ ಹಾಗೂ ಈ ಸಂಬಂಧ ವಿಚಾರಣೆ ನಡೆಯಬೇಕಾದ ಅಗತ್ಯವಿಲ್ಲ" ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಪತಂಜಲಿ ಆಯುರ್ವೇದ್ ಲಿಮಿಟೆಡ್ ಕಂಪನಿಯು ಉತ್ತರಾಖಂಡದ ಹರಿದ್ವಾರ, ಹರ್ಯಾಣದ ಸೋನಿಪತ್ ಹಾಗೂ ಮಹಾರಾಷ್ಟ್ರದ ಅಹ್ಮದ್‌ನಗರ್‌ನಲ್ಲಿ ಒಟ್ಟು ಮೂರು ಉತ್ಪಾದನಾ ಘಟಕಗಳನ್ನು ಹೊಂದಿದೆ. ಆದರೆ, ಈ ಕಂಪನಿಯು ಅಧಿಕ ಪ್ರಮಾಣದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದರೂ, ಅದಕ್ಕೆ ತಕ್ಕಂತೆ ಯಾವುದೇ ಆದಾಯ ತೆರಿಗೆ ಪಾವತಿ ಪ್ರಮಾಣ ಪತ್ರಗಳಿಲ್ಲದೆ ಸಂಶಯಾಸ್ಪದ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದೆ ಎಂಬ ಮಾಹಿತಿಗಳನ್ನು ಆಧರಿಸಿ, ಜಿಎಸ್‌ಟಿ ಅಧಿಕಾರಿಗಳು ಈ ಕಂಪನಿಯ ವಿರುದ್ಧ ತನಿಖೆ ಕೈಗೊಂಡಿದ್ದರು.
ಎಪ್ರಿಲ್ 19, 2024ರಂದು 273 ಕೋಟಿ ರೂ. ಜಿಎಸ್‌ಟಿ ದಂಡ ಪಾವತಿಸುವಂತೆ ಘಾಝಿಯಾಬಾದ್‌ನ ಜಿಎಸ್‌ಟಿ ಗುಪ್ತಚರ ಪ್ರಧಾನ ನಿರ್ದೇಶನಾಲಯವು ಪತಂಜಲಿ ಆಯುರ್ವೇದ್ ಲಿಮಿಟೆಡ್ ಕಂಪನಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.