ಲೈಂಗಿಕ ಕಿರುಕುಳ ಆರೋಪ: ಕ್ರಿಕೆಟಿಗ ಯಶ್ ದಯಾಳ್ ಬಂಧನಕ್ಕೆ ತಾತ್ಕಾಲಿಕ ತಡೆ ನೀಡಿದ ಅಲಹಾಬಾದ್ ಹೈಕೋರ್ಟ್
ಯಶ್ ದಯಾಳ್ (Photo: PTI)
ಪ್ರಯಾಗರಾಜ್: ಮದುವೆಯ ಭರವಸೆ ನೀಡಿ ಲೈಂಗಿಕ ಶೋಷಣೆ ನೀಡಿದ ಆರೋಪದ ಮೇಲೆ ಕ್ರಿಕೆಟಿಗ ಯಶ್ ದಯಾಳ್ ವಿರುದ್ಧ ದಾಖಲಾದ ಪ್ರಕರಣದಲ್ಲಿ ದಯಾಳ್ ಅವರನ್ನು ಬಂಧಿಸದಂತೆ ಅಲಹಾಬಾದ್ ಹೈಕೋರ್ಟ್ ಮಂಗಳವಾರ ತಾತ್ಕಾಲಿಕ ತಡೆ ನೀಡಿದ್ದು, ವಿಚಾರಣೆಯ ಮುಂದಿನ ಹಂತದವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿದೆ.
ಯಶ್ ದಯಾಳ್ ಅವರು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರವಾಗಿ ಆಡುತ್ತಿದ್ದಾರೆ. 27 ವರ್ಷದ ಈ ಬೌಲರ್ ವಿರುದ್ಧ ಜುಲೈ 6 ರಂದು ಗಾಝಿಯಾಬಾದ್ ಜಿಲ್ಲೆಯ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 69 (ವಂಚನೆಯ ವಿಧಾನದಿಂದ ಲೈಂಗಿಕ ಸಂಬಂಧ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ದಯಾಳ್ ಸಲ್ಲಿಸಿದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಅನಿಲ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು, ಬಂಧನ ತಡೆಗೆ ಆದೇಶ ನೀಡಿದೆ. ಈ ವಿಚಾರವನ್ನು ದಯಾಳ್ ಅವರ ವಕೀಲ ಗೌರವ್ ತ್ರಿಪಾಠಿ ಪಿಟಿಐ ಸುದ್ದಿಸಂಸ್ಥೆಗೆ ದೃಢಪಡಿಸಿದ್ದಾರೆ.
ಸಂತ್ರಸ್ತೆಯ ಪ್ರಕಾರ, ಇಬ್ಬರೂ ಸುಮಾರು ಐದು ವರ್ಷಗಳ ಹಿಂದೆ ಪರಿಚಿತರಾದರು. ದಯಾಳ್ ಮದುವೆಯ ಭರವಸೆ ನೀಡಿದ್ದರಿಂದ ಸಂಬಂಧವು ಗಾಢವಾಯಿತು. ಆದರೆ ಅವರು ನಿರಂತರವಾಗಿ ಮದುವೆಯ ವಿಷಯವನ್ನು ಮುಂದೂಡುತ್ತಾ ಇತರ ಮಹಿಳೆಯರೊಂದಿಗೆ ಸಂಪರ್ಕ ಹೊಂದಿರುವುದು ತಿಳಿದುಬಂದ ಮೇಲೆ ಮಹಿಳೆ ದೂರು ಸಲ್ಲಿಸಿದರು.
ಆರಂಭದಲ್ಲಿ ಜೂನ್ 21 ರಂದು ಉತ್ತರ ಪ್ರದೇಶದ ‘ಐಜಿಆರ್‌ಎಸ್’ ಆನ್‌ಲೈನ್ ಪೋರ್ಟಲ್ ಮುಖಾಂತರ ದೂರು ನೀಡಲಾಗಿತ್ತು. ನಂತರ ಕ್ರಮವಾಗಿ ಪೊಲೀಸ್ ತನಿಖೆ ನಡೆಯಿದು ಎಫ್‌ಐಆರ್ ದಾಖಲಾಗಿತ್ತು.