ಸಿಖ್ಖರ ಧಾರ್ಮಿಕ ಸ್ವಾತಂತ್ರ್ಯದ ಕುರಿತ ಹೇಳಿಕೆ : ರಾಹುಲ್ ಗಾಂಧಿಯ ಅರ್ಜಿಯನ್ನು ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್
ರಾಹುಲ್ ಗಾಂಧಿ | PTI
ಲಕ್ನೋ, ಸೆ. 26: ಸಿಖ್ಖರ ಧಾರ್ಮಿಕ ಸ್ವಾತಂತ್ರ್ಯದ ವಿಷಯದಲ್ಲಿ ತಾನು ನೀಡಿರುವ ಹೇಳಿಕೆಗೆ ಸಂಬಂಧಿಸಿ ವಾರಾಣಸಿಯ ಎಮ್‌ಪಿ/ಎಮ್‌ಎಲ್‌ಎ ವಿಶೇಷ ನ್ಯಾಯಾಲಯವು ನೀಡಿರುವ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಭಾರತದಲ್ಲಿ ಸಿಖ್ಖರ ಧಾರ್ಮಿಕ ಸ್ವಾತಂತ್ರ್ಯದ ವಿಷಯದಲ್ಲಿ ರಾಹುಲ್ ಗಾಂಧಿ ಕಳೆದ ವರ್ಷ ಅಮೆರಿಕದಲ್ಲಿ ನೀಡಿರುವ ಹೇಳಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ತನ್ನ ವಿರುದ್ಧ ದಾಖಲಾಗಿರುವ ದೂರನ್ನು ವಿಚಾರಣೆಗೆ ಸ್ವೀಕರಿಸಲು ವಾರಾಣಸಿ ನ್ಯಾಯಾಲಯವು ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದರು. ಅದನ್ನು ಈಗ ಹೈಕೋರ್ಟ್ ವಜಾಗೊಳಿಸಿದೆ ಎನ್ನಲಾಗಿದೆ.
2024ರಲ್ಲಿ ಅಮೆರಿಕಕ್ಕೆ ನೀಡಿದ್ದ ಭೇಟಿಯ ವೇಳೆ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ‘‘ಒಬ್ಬ ಸಿಖ್ಖನಾಗಿ ನನಗೆ ಭಾರತದಲ್ಲಿ ಪೇಟ ಧರಿಸಲು ಬಿಡುತ್ತಾರೆಯೇ; ಅಥವಾ ಓರ್ವ ಸಿಖ್ಖನಾಗಿ ನನಗೆ ಭಾರತದಲ್ಲಿ ಕಡ ಧರಿಸಲು ಬಿಡುತ್ತಾರೆಯೇ; ಅಥವಾ ಓರ್ವ ಸಿಖ್ಖನಾಗಿ ನನಗೆ ಗುರುದ್ವಾರಕ್ಕೆ ಹೋಗಲು ಬಿಡುತ್ತಾರೆಯೇ ಎನ್ನುವುದಕ್ಕೆ ಸಂಬಂಧಿಸಿದ ಹೋರಾಟ ಇದಾಗಿದೆ’’ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಈ ಹೇಳಿಕೆಯನ್ನು ಉಲ್ಲೇಖಿಸಿ ವಾರಾಣಸಿಯ ನಾಗೇಶ್ವರ ಮಿಶ್ರಾ ಎಂಬವರು, ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಕೋರಿ ವಾರಾಣಸಿ ನ್ಯಾಯಾಲಯಕ್ಕೆ ಹೋಗಿದ್ದರು.