×
Ad

ಯಾವುದೇ ದೇಶಕ್ಕೆ ಬೆಂಬಲ ವ್ಯಕ್ತಪಡಿಸುವ ಪೋಸ್ಟ್ ಪ್ರಕಟಿಸಿದರೆ ಭಾರತದ ಸಾರ್ವಭೌಮತೆಗೆ ಧಕ್ಕೆಯಾಗುವುದಿಲ್ಲ: ಅಲಹಾಬಾದ್ ಹೈಕೋರ್ಟ್

Update: 2025-10-04 20:08 IST

ಅಲಹಾಬಾದ್ ಹೈಕೋರ್ಟ್ | PC : PTI

ಅಲಹಾಬಾದ್,ಸೆ.4: ಯಾವುದೇ ದೇಶಕ್ಕೆ ಬೆಂಬಲವನ್ನು ಪ್ರದರ್ಶಿಸುವ ಸಂದೇಶದ ಪೋಸ್ಟ್‌ಗಳನ್ನು ಪ್ರಕಟಿಸಿದಲ್ಲಿ, ಅದಕ್ಕೆ ಭಾರತೀಯ ನ್ಯಾಯಸಂಹಿತೆಯ ಕಠಿಣವಾದ 152 ಸೆಕ್ಷನ್‌ನ ನಿಯಮಗಳು ಅನ್ವಯಿಸುವುದಿಲ್ಲವೆಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಭಾರತದ ಸಾರ್ವಭೌಮತೆ, ಏಕತೆ ಹಾಗೂ ಸಮಗ್ರತೆಯನ್ನು ಅಪಾಯಕ್ಕೆ ಸಿಲುಕಿಸುವಂತಹ ಕೃತ್ಯಗಳಿಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ಅನ್ನು ಅನ್ವಯಿಸಲಾಗುತ್ತದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ಹೊಸತಾಗಿ ಜಾರಿಗೊಳಿಸಲಾದ ನಿಯಮವಾಗಿದ್ದು, ಅದು ಹಿಂದಿನ ಭಾರತೀಯ ನ್ಯಾಯಸಂಹಿತೆಗೆ ತತ್ಸಮಾನವಾದುದಲ್ಲ ಮತ್ತು ಅದನ್ನು ಅತ್ಯಂತ ಜಾಗರೂಕತೆಯೊಂದಿಗೆ ಜಾರಿಗೊಳಿಸಬೇಕಾಗಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಆದಾಗ್ಯೂ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ಕೂಡಾ ವಸಾಹತು ಶಾಹಿ ಕಾಲದ ದೇಶದ್ರೋಹ ಕಾನೂನಿನ ‘ಮರುಪ್ಯಾಕೇಜ್ ಆವೃತ್ತಿ’ ಎಂದು ವಿಮರ್ಶಕರು ಟೀಕಿಸಿದ್ದಾರೆ.

2024ರ ಜುಲೈ 1ರಂದು ವಸಾಹತುಶಾಹಿ ಬ್ರಿಟಿಶ್ ಯುಗದ ಭಾರತೀಯ ದಂಡಸಂಹಿತೆಯನ್ನು ತೆರವುಗೊಳಿಸಿ, ಅದರ ಸ್ಥಾನದಲ್ಲಿ ಭಾರತೀಯ ನ್ಯಾಯ ಸಂಹಿತೆಯ 2023 ಅನ್ನು ಜಾರಿಗೆ ತರಲಾಗಿದೆ.

‘ಪಾಕಿಸ್ತಾನ್ ಝಿಂದಾಬಾದ್’ ಎಂಬ ಫೇಸ್ಬುಕ್ ಪೋಸ್ಟ್ ಅನ್ನು ಫಾರ್ವರ್ಡ್ ಮಾಡಿದ ಆರೋಪ ಎದುರಿಸುತ್ತಿರುವ ಮೀರತ್ ನಿವಾಸಿ ಸಾಜಿದ್ ಚೌಧುರಿಯನ್ನು ಜಾಮೀನು ಬಿಡುಗಡೆಗೊಳಿಸಿದ ಸಂದರ್ಭ ನ್ಯಾಯಾಲಯ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಪೌರರ ನಡುವೆ ಕ್ರೋಧವನ್ನು ಸೃಷ್ಟಿಸುವ ಹಾಗೂ ಸಾಮರಸ್ಯವನ್ನು ಕೆಡಿಸಬಲ್ಲ ಪೋಸ್ಟ್ ಅನ್ನು ಪ್ರಸಾರ ಮಾಡುವುದು ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 196ರಡಿ ದಂಡನೀಯ ಅಪರಾಧವಾಗುತ್ತದೆ. ಆದರೆ ಅಂತಹ ಪೋಸ್ಟ್‌ಗಳಿಗೆ ಖಂಡಿತವಾಗಿಯೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152ರ ಅಂಶಗಳಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಮೂರ್ತಿ ಸಂತೋಶ್ ರಾಯ್ ಅವರು ಆದೇಶದಲ್ಲಿ ತಿಳಿಸಿರುವುದಾಗಿ ಲೈವ್ ಲಾ ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News