×
Ad

ದೇಶಾದ್ಯಂತ ಕೇವಲ ಎರಡು ಹೈಕೋರ್ಟ್‌ಗಳಲ್ಲಿ ಪೂರ್ಣ ಸಿಬ್ಬಂದಿ : 76 ಖಾಲಿ ಹುದ್ದೆಗಳೊಂದಿಗೆ ಅಲಹಾಬಾದ್ ಅಗ್ರಸ್ಥಾನದಲ್ಲಿ!

Update: 2025-10-04 21:59 IST

PC - livelaw

ಹೊಸದಿಲ್ಲಿ,ಅ.4: ನ್ಯಾಯಾಂಗ ಇಲಾಖೆಯ ಅಂಕಿಅಂಶಗಳ ಪ್ರಕಾರ ಸೆ.1,2025ಕ್ಕೆ ಇದ್ದಂತೆ ದೇಶಾದ್ಯಂತ ಉಚ್ಚ ನ್ಯಾಯಾಲಯಗಳ ಒಟ್ಟು ಅನುಮೋದಿತ 1,122 ನ್ಯಾಯಾಧೀಶರ ಹುದ್ದೆಗಳ ಪೈಕಿ 330 ಹುದ್ದೆಗಳು ಖಾಲಿಯಿದ್ದು,ಇದು ಹೆಚ್ಚುತ್ತಿರುವ ವಿಳಂಬಕ್ಕೆ ಕಾರಣವಾಗಿದೆ ಮತ್ತು ಲಕ್ಷಾಂತರ ಕಕ್ಷಿಗಾರರ ಮೇಲೆ ಪರಿಣಾಮವನ್ನು ಬೀರುತ್ತಿದೆ.

ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ 35 ಕಾಯಂ ಮತ್ತು 41 ಹೆಚ್ಚುವರಿ ನ್ಯಾಯಾಧೀಶರು ಸೇರಿದಂತೆ ಅತ್ಯಂತ ಹೆಚ್ಚು,76 ಹುದ್ದೆಗಳು ಖಾಲಿಯಿವೆ. ಬಾಂಬೆ(26), ಪಂಜಾಬ್ ಮತ್ತು ಹರ್ಯಾಣ(25), ಕಲ್ಕತ್ತಾ (24), ಮದ್ರಾಸ್(19), ಪಾಟ್ನಾ(18), ದಿಲ್ಲಿ(16) ಮತ್ತು ರಾಜಸ್ಥಾನ(7) ಗಮನಾರ್ಹ ಕೊರತೆಯನ್ನು ಎದುರಿಸುತ್ತಿರುವ ಪ್ರಮುಖ ಉಚ್ಚ ನ್ಯಾಯಾಲಯಗಳಲ್ಲಿ ಸೇರಿವೆ. ಉತ್ತರಾಖಂಡ ಮತ್ತು ತ್ರಿಪುರಾ ಉಚ್ಚ ನ್ಯಾಯಾಲಯಗಳಲ್ಲಿ ಅನುಕ್ರಮವಾಗಿ ಎರಡು ಮತ್ತು ಒಂದು ಹುದ್ದೆಗಳು ಖಾಲಿಯಿವೆ. 25 ರಾಜ್ಯಗಳ ಪೈಕಿ ಸಿಕ್ಕಿಂ ಮತ್ತು ಮೇಘಾಲಯಗಳ ಉಚ್ಚ ನ್ಯಾಯಾಲಯಗಳು ಮಾತ್ರ ಪೂರ್ಣ ಸಾಮರ್ಥ್ಯದೊಡನೆ ಕಾರ್ಯ ನಿರ್ವಹಿಸುತ್ತಿವೆ.

ಉಚ್ಚ ನ್ಯಾಯಾಲಯಗಳಲ್ಲಿ 67 ಲಕ್ಷಕ್ಕೂ ಅಧಿಕ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ 60,000ಕ್ಕೂ ಅಧಿಕ ಪ್ರಕರಣಗಳು ಬಾಕಿಯಿರುವುದನ್ನು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್‌ನ ಅಂಕಿಅಂಶಗಳು ತೋರಿಸಿವೆ. ಸರ್ವೋಚ್ಚ ನ್ಯಾಯಾಲಯವು ಭಾರತದ ಮುಖ್ಯ ನ್ಯಾಯಾಧೀಶರು ಸೇರಿದಂತೆ 34 ನ್ಯಾಯಾಧೀಶರ ಪೂರ್ಣ ಬಲದೊಂದಿಗೆ ಕಾರ್ಯ ನಿರ್ವಹಿಸುತ್ತಿದೆಯಾದರೂ ಉಚ್ಚ ನ್ಯಾಯಾಲಯಗಳು ಅತಿಯಾದ ಕೆಲಸದ ಹೊರೆಯಿಂದ ಬಸವಳಿದಿವೆ.

ಕೊಲಿಜಿಯಂ ಮತ್ತು ಸರಕಾರಿ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬ ಕೊರತೆಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಉಚ್ಚ ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ನ್ಯಾಯ ವ್ಯವಸ್ಥೆಗೆ ಪ್ರಮುಖ ಅಡಚಣೆಯಾಗಿದ್ದು ವಿಳಂಬಗಳಿಗೆ ಮತ್ತು ಬಾಕಿಯಿರುವ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಾಜಿ ಹೈಕೋರ್ಟ್ ನ್ಯಾಯಾಧೀಶರು ಮತ್ತು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉಚ್ಚ ನ್ಯಾಯಾಲಯಗಳಲ್ಲಿ ಖಾಲಿಯಿರುವ ಹುದ್ದೆಗಳಲ್ಲಿ 161 ಖಾಯಂ ಮತ್ತು 169 ಹೆಚ್ಚುವರಿ(ತಾತ್ಕಾಲಿಕ) ನ್ಯಾಯಾಧೀಶರ ಹುದ್ದೆಗಳು ಸೇರಿವೆ. ರಾಷ್ಟ್ರಪತಿಗಳು ಕೆಲಸದ ಹೊರೆ ಹೆಚ್ಚುವುದನ್ನು ತಾತ್ಕಾಲಿಕವಾಗಿ ತಡೆಯಲು ಹೆಚ್ಚುವರಿ ನ್ಯಾಯಾಧೀಶರನ್ನು ಎರಡು ವರ್ಷಗಳ ಅವಧಿಗೆ ನೇಮಕಗೊಳಿಸುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News