ಬಲವಂತದ ಮತಾಂತರ ಆರೋಪ: ಎಫ್ಐಆರ್ ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್
ಉತ್ತರ ಪ್ರದೇಶ ಸರಕಾರಕ್ಕೆ 75 ಸಾವಿರ ರೂ. ದಂಡ
ಅಲಹಾಬಾದ್ ಹೈಕೋರ್ಟ್ | PC : PTI
ಲಕ್ನೊ, ನ. 5: ಮಹಿಳೆಯೋರ್ವರನ್ನು ಮತಾಂತರಿಸಲು ಆಮಿಷ ಒಡ್ಡಿದ ಆರೋಪದಲ್ಲಿ ಉತ್ತರಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ-2021ರ ಅಡಿಯಲ್ಲಿ ದಾಖಲಾಗಿದ್ದ ಎಫ್ಐಆರ್ ಅನ್ನು ಅಲಹಾಬಾದ್ ಉಚ್ಚನ್ಯಾಯಾಲಯ ರದ್ದುಗೊಳಿಸಿದೆ ಹಾಗೂ ಉತ್ತರ ಪ್ರದೇಶಕ್ಕೆ 75 ಸಾವಿರ ರೂ. ದಂಡ ವಿಧಿಸಿದೆ.
ಮಗಳನ್ನು ಭೇಟಿಯಾಗಲು ದಿಲ್ಲಿಗೆ ಸ್ವ ಇಚ್ಛೆಯಿಂದ ಹೋಗಿದ್ದೆ ಎಂದು ಮಹಿಳೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದರೂ, ಅಪಹರಣ ಪ್ರಕರಣದ ತನಿಖೆ ಮುಂದುವರಿಸಿರುವುದಕ್ಕೆ ಅಲಹಾಬಾದ್ ಉಚ್ಚ ನ್ಯಾಯಾಲಯ ಉತ್ತರಪ್ರದೇಶ ಸರಕಾರಕ್ಕೆ 75 ಸಾವಿರ ರೂ. ದಂಡ ವಿಧಿಸಿದೆ ಹಾಗೂ ಪ್ರಕರಣದ ಆರೋಪಿಯಾಗಿರುವ ಉಮೇದ್ ನನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದೆ.
ಹತ್ಯೆಗೈಯಲು ಅಪಹರಣಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 140ರ ಅಡಿಯಲ್ಲಿ ಬಹರಾಯಿಚ್ ಜಿಲ್ಲೆಯಲ್ಲಿ ತಮ್ಮ ವಿರುದ್ಧ ದಾಖಲಿಸಿದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಉಮೆದ್ ಆಲಿಯಾಸ್ ಉಬೈದ್ ಖಾನ್ ಹಾಗೂ ಇತರರು ಸಲ್ಲಿಸಿದ ಅರ್ಜಿಯ ಕುರಿತಂತೆ ನ್ಯಾಯಮೂರ್ತಿಗಳಾದ ಅಬ್ದುಲ್ ಮೊನ್ ಹಾಗೂ ಬಬಿತಾ ರಾಣಿ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಿಧಿಸಲಾದ ದಂಡದ ಮೊತ್ತದಲ್ಲಿ 50 ಸಾವಿರ ರೂ.ವನ್ನು ಸೆಪ್ಟಂಬರ್ 18ರಂದು ಬಂಧಿತರಾಗಿರುವ ಹಾಗೂ ಅನಂತರ ಕಾರಾಗೃಹದಲ್ಲಿರುವ ದೂರುದಾರ ಉಮೇದ್ ಗೆ ನೀಡುವಂತೆ ಪೀಠ ನಿರ್ದೇಶಿಸಿದೆ.
ಉಳಿದ 25 ಸಾವಿರ ರೂ.ವನ್ನು ಉಚ್ಚ ನ್ಯಾಯಾಲಯದ ಕಾನೂನು ನೆರವು ಸೇವೆಗೆ ನೀಡುವಂತೆ ಲಕ್ನೋ ಪೀಠ ಅಕ್ಟೋಬರ್ 30ರಂದು ನೀಡಿದ ಆದೇಶ ಹೇಳಿದೆ.
ನ್ಯಾಯಾಲಯದ ಪ್ರಕಾರ ತನಿಖೆಯ ಸಂದರ್ಭ ಮಹಿಳೆಯನ್ನು ಪತ್ತೆ ಹಚ್ಚಲಾಗಿತ್ತು ಹಾಗೂ ಸೆಪ್ಟಂಬರ್ 19ರಂದು ನ್ಯಾಯಾಂಗ ದಂಡಾಧಿಕಾರಿಯವರ ಮುಂದೆ ಹಾಜರುಪಡಿಸಲಾಗಿತ್ತು ಹಾಗೂ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು. ತನಗೆ ಪತಿ ಪದೇ ಪದೇ ಥಳಿಸುತ್ತಿದ್ದ. ಆದುದರಿಂದ ತಾನು ಸ್ವ ಇಚ್ಛೆಯಿಂದ ಮನೆ ತ್ಯಜಿಸಿದೆ ಎಂದು ಅವರು ಹೇಳಿದ್ದರು. ಧಾರ್ಮಿಕ ಮತಾಂತರದ ಬಗ್ಗೆ ಅವರು ಯಾವುದೇ ಆರೋಪ ಮಾಡಿಲ್ಲ ಎಂದಿದೆ.
ಮಹಿಳೆಯ ಈ ಸ್ಪಷ್ಟ ಹೇಳಿಕೆ ಹೊರತಾಗಿಯೂ ಪೊಲೀಸರು ಈ ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ ಹಾಗೂ ದೂರುದಾರರನ್ನು ಜೈಲಿನಲ್ಲಿ ಇರಿಸಿದ್ದಾರೆ ಎಂದು ನ್ಯಾಯಾಲಯ ಗಮನಿಸಿತು.
ಆಕೆಯ ಪತಿ ದಾಖಲಿಸಿದ ಎಫ್ಐಆರ್ ಆಧಾರಿಸಿದ ಪ್ರಾಸಿಕ್ಯೂಷನ್ ನ ಪ್ರಕರಣವನ್ನು ಮಹಿಳೆ ಒಪ್ಪಿಕೊಳ್ಳದೇ ಇರುವುದರಿಂದ ತನಿಖೆಯನ್ನು ಮುಂದುವರಿಸಿರುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಸುಳ್ಳು ಎಫ್ಐಆರ್ ಆಧಾರದಲ್ಲಿ ಉಮೇದ್ ನನ್ನು ಕಾರಾಗೃಹದಲ್ಲಿ ಇರಿಸಿರುವುದನ್ನು ಗಮನಿಸಿರುವ ಪೀಠ, ಸೆಪ್ಟಂಬರ್ 13ರಂದು ದಾಖಲಿಸಿದ ಪ್ರಕರಣವನ್ನು ರದ್ದುಗೊಳಿಸಿದೆ ಹಾಗೂ ಉಮೇದ್ ನನ್ನು ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿದೆ.