ಗಲಭೆ, ಹಲ್ಲೆ ಆರೋಪ | ಬಿಜೆಪಿಯ ಮಾಜಿ ಶಾಸಕ, ಪುತ್ರನ ಬಂಧನ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಗಲಭೆ ಹಾಗೂ ಹಲ್ಲೆ ನಡೆಸಿದ ಆರೋಪದಲ್ಲಿ ಬಿಜೆಪಿಯ ಮಾಜಿ ಶಾಸಕ ಹಾಗೂ ಆತನ ಪುತ್ರ ಮತ್ತು ಇತರ ಐವರನ್ನು ಉತ್ತರಪ್ರದೇಶದ ಬಾಲ್ಲಿಯಾದಲ್ಲಿ ಬಂಧಿಸಲಾಗಿದೆಯೆಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬಾಲಿಯಾದಲ್ಲಿ ಬುಧವಾರ ಪೆಟ್ರೋಲ್ ಪಂಪ್ ಒಂದರ ಸಮೀಪ ಕರಣ್ಚಾಪ್ರಾ ಪಟ್ಟಣದ ನಿವಾಸಿ ಸಂತೋಷ್ಕುಮಾರ್ ಸಿಂಗ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯ ಮಾಜಿ ಶಾಸಕ ಸುರೇಂದ್ರ ಸಿಂಗ್, ಆತನ ಪುತ್ರ ವಿದ್ಯಾಭೂಷಣ್ ಸಿಂಗ್ ಹಾಗೂ ಇತರ ಐವರನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಮೇ 29ರಂದು ವಾಗ್ವಾದವೊಂದು ನಡೆದ ಬಳಿಕ ಆರೋಪಿಗಳು ತನ್ನ ಮೇಲೆ ದಾಳಿ ನಡೆಸಿದ್ದರೆಂದು ಸಂತೋಷ್ ಕುಮಾರ್ ದೂರು ನೀಡಿದ್ದರು.
ಸಂತೋಷ್ ಕುಮಾರ್ ಅವರು ನೀಡಿದ ದೂರನ್ನು ಆಧರಿಸಿ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ಗಳಾದ 308 ( ದಂಡನೀಯವಾದ ನರಹತ್ಯೆಗೆ ಯತ್ನ), 147 (ಗಲಭೆ ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸಿರುವುದು) ಹಾಗೂ 506 (ಕ್ರಿಮಿನಲ್ ಬೆದರಿಕೆ)ರಡಿ ಪ್ರಕರಣ ದಾಖಲಾಗಿದೆಯೆಂದು ದೊಕಾತಿ ಪೊಲೀಸ್ ಠಾಣಾಧಿಕಾರಿ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.
ಸುರೇಂದ್ರ ಸಿಂಗ್ ಅವರು 2017ರಲ್ಲಿ ಬೈರಿಯಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2022ರ ಚುನಾವಣೆಯಲ್ಲಿ ಪಕ್ಷವು ಅವರಿಗೆ ಟಿಕೆಟನ್ನು ನಿರಾಕರಿಸಿತ್ತು.