×
Ad

ಉಗ್ರಗಾಮಿಗಳ ಜೊತೆ ನಂಟು ಆರೋಪ ; ನಿವೃತ್ತ ಸೇನಾಧಿಕಾರಿಯ ಬಂಧನ

Update: 2024-02-06 21:06 IST

ಹೊಸದಿಲ್ಲಿ: ಜಮ್ಮುಕಾಶ್ಮೀರ ಕುಪ್ವಾರ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಉಗ್ರಗಾಮಿ ಗುಂಪು ಲಷ್ಕರೆ ತಯ್ಯಬಾ ಜೊತೆ ನಂಟು ಹೊಂದಿದ್ದಾನೆಂದು ಶಂಕಿಸಲಾದ ನಿವೃತ್ತ ಸೇನಾಧಿಕಾರಿಯೊಬ್ಬನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿನ್ನು ರಿಯಾಝ್ ಅಹ್ಮದ್ ರಾಥೆರ್ ಎಂದು ಗುರುತಿಸಲಾಗಿದೆ. ಆತನನ್ನು ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ರವಿವಾರ ಬಂಧಿಸಲಾಗಿದೆ. ಗಡಿನಿಯಂತ್ರಣ ರೇಖೆ (ಎಲ್ಓಸಿ)ಯಾಚೆಯಿಂದ ಶಸ್ತ್ರಾಸ್ತ್ರಗಳನ್ನು ಪಡೆಯುವಲ್ಲಿ ಆತ ಪ್ರಮುಖ ಪಾತ್ರ ವಹಿಸಿರುವ ಸಾಧ್ಯತೆಯಿದೆಯೆಂದು ಪೊಲೀಸರು ಶಂಕಿಸಿದ್ದಾರೆ.

ಆರೋಪಿ ರಿಯಾಝ್ ಅಹ್ಮದ್ ರಾಥೆರ್ , ಇನ್ನಿಬ್ಬರು ಸಹ ಆರೋಪಿಗಳಾದ ಖುರ್ಷಿದ್ ಅಹ್ಮದ್ ರಾಥೆರ್ ಹಾಗೂ ಗುಲಾಂ ಸರ್ವಾರ್ ರಾಥೆರ್ ಜೊತೆಗೂಡಿ ಗಡಿ ನಿಯಂತ್ರಣ ರೇಖೆಯಾಚೆಗಿನ ಉಗ್ರಗಾಮಿ ಗುಂಪುಗಳ ಹ್ಯಾಂಡ್ಲರ್ ಗಳಿಂದ ಇನ್ನಷ್ಟು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಸಂಚು ಹೂಡಿದ್ದರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಮ್ಮುಕಾಶ್ಮೀರದಲ್ಲಿ ಇತ್ತೀಚೆಗೆ ತನಿಖಾ ಸಂಸ್ಥೆಗಳು ಉಗ್ರಗಾಮಿಗಳ ಘಟಕವೊಂದನ್ನು ಭೇದಿಸಿದ ಸಂದರ್ಭದಲ್ಲಿ ದೊರೆತ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.

ಬಂಧಿತ ರಿಯಾಝ್ ಅಹ್ಮದ್‌ ನಿಂದ ಐದು ಎಕೆ ರೈಫಲ್ಸ್ (ಶಾರ್ಟ್), ಐದು ಎಕೆ ಕಾಡತೂಸುಗಳು ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಅವರು ಹೇಳಿದ್ದಾರೆ.

ಈ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಲಷ್ಕರ್ ತಯ್ಯಬಾದ ಹ್ಯಾಂಡ್ಲರ್ಗಳಾದ ಮಂಝೂರ್ ಅಹ್ಮದ್ ಶೇಖ್ ಹಾಗೂ ಖ್ವಾಝಿ ಮೊಹಮ್ಮದ್ ಖುಶಾಲ್ ಎಂಬವರು ಆರೋಪಿಗಳೆಗೆ ರವಾನಿಸಿದ್ದರೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News