ಅಂಬಾನಿ ಅಲ್ಪಸ್ವಲ್ಪ ಮರಾಠಿ ಮಾತನಾಡುತ್ತಾರೆ, ನಿಮಗೆ ಧೈರ್ಯವಿದ್ದರೆ ಅವರನ್ನು ಎದುರಿಸಿ: ಮರಾಠಿಪರ ಗುಂಪುಗಳಿಗೆ ನಿಶಿಕಾಂತ ದುಬೆ ಸವಾಲು
ನಿಶಿಕಾಂತ ದುಬೆ | PC : PTI
ಗ್ಯಾಂಗ್ಟಕ್(ಸಿಕ್ಕಿಂ): ಮರಾಠಿ ಭಾಷಾ ವಿವಾದದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಇತ್ತೀಚಿನ ಪೋಸ್ಟ್ ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಯನ್ನೆಬ್ಬಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ನಿಶಿಕಾಂತ ದುಬೆ ಅವರು, ತನ್ನ ಹೇಳಿಕೆಗಳನ್ನು ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಗುರುವಾರ ಸಮಜಾಯಿಷಿ ನೀಡಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತಾನು ಹೇಳಿದ್ದನ್ನು ಸಂಪೂರ್ಣವಾಗಿ ತಿರುಚಲಾಗಿದೆ ಎಂದು ಹೇಳಿದರು.
‘ಈ ದೇಶದ ಆರ್ಥಿಕತೆಯಲ್ಲಿ ಮಹಾರಾಷ್ಟ್ರದ ದೊಡ್ಡ ಕೊಡುಗೆಯಿದೆ. ಆದರೆ ನಾನು ಹೇಳುತ್ತಿರುವುದೇನೆಂದರೆ ಮುಂಬೈ ಅಥವಾ ಮಹಾರಾಷ್ಟ್ರ ಪಾವತಿಸುತ್ತಿರುವ ತೆರಿಗೆಯಲ್ಲಿ ನಮ್ಮ ಕೊಡುಗೆಯೂ ಇದೆ. ಇದಕ್ಕೂ ಠಾಕ್ರೆ ಕುಟುಂಬ ಅಥವಾ ಮರಾಠಾಕ್ಕೂ ಯಾವುದೇ ಸಂಬಂಧವಿಲ್ಲ ’ಎಂದರು.
‘ತೆರಿಗೆಗಳನ್ನು ಪಾವತಿಸುತ್ತಿರುವ SBI ಮತ್ತು LIC ಎರಡೂ ಮುಂಬೈನಲ್ಲಿ ತಮ್ಮ ಮುಖ್ಯ ಕಚೇರಿಗಳನ್ನು ಹೊಂದಿವೆ. ನಾನು ಈಗ ಸಿಕ್ಕಿಮ್ ನಲ್ಲಿ ಇದ್ದೇನೆ. ಇಲ್ಲಿಯ ಜನರೂ SBIನಲ್ಲಿ ತಮ್ಮ ಹಣವನ್ನು ಠೇವಣಿಯಿಡುತ್ತಾರೆ. ಅವರ ಹಣವು ಅಲ್ಲೇ ಇದೆ, ಆದರೆ ಅದರ ತೆರಿಗೆ ಹಣವು ಮಹಾರಾಷ್ಟ್ರದ ಖಾತೆಗೆ ಹೋಗುತ್ತಿದೆ ’ಎಂದು ದುಬೆ ಹೇಳಿದರು.
‘ನೀವು ಬಡವರನ್ನು ಥಳಿಸುತ್ತೀರಿ. ಆದರೆ ಮುಕೇಶ್ ಅಂಬಾನಿ ಅಲ್ಲಿಯೇ ವಾಸವಾಗಿದ್ದಾರೆ ಮತ್ತು ಅವರು ಅಲ್ಪಸ್ವಲ್ಪ ಮರಾಠಿ ಮಾತನಾಡುತ್ತಾರೆ. ನಿಮಗೆ ಧೈರ್ಯವಿದ್ದರೆ ಅವರೆದುರು ಹೋಗಿ. ಮಾಹಿಮ್ ನಲ್ಲಿ ಮುಸ್ಲಿಮರು ಭಾರೀ ಸಂಖ್ಯೆಯಲ್ಲಿದ್ದಾರೆ, ನಿಮಗೆ ಧೈರ್ಯವಿದ್ದರೆ ಅಲ್ಲಿಗೆ ಹೋಗಿ. SBI ಅಧ್ಯಕ್ಷರು ಮರಾಠಿ ಮಾತನಾಡುವುದಿಲ್ಲ. ಅವರನ್ನು ಹೊಡೆಯಲು ಯತ್ನಿಸಿ’ ಎಂದು ದುಬೆ ಭಾಷಾ ವಿವಾದದ ಮುಂಚೂಣಿಯಲ್ಲಿರುವ ಮಹಾರಾಷ್ಟ್ರ ನಿವನಿರ್ಮಾಣ ಸಮಿತಿ(ಎಂಎನ್‌ಎಸ್)ಯನ್ನು ಹೆಸರಿಸದೆ ಪ್ರತಿಭಟನಾಕಾರರಿಗೆ ಸವಾಲು ಹಾಕಿದರು.
ಜು.1ರಂದು ಮುಂಬೈನ ಭಾಯಂದರ್ ನಲ್ಲಿ ಮರಾಠಿ ಮಾತನಾಡದ್ದಕ್ಕಾಗಿ ಫುಡ್ ಸ್ಟಾಲ್ ಮಾಲಿಕನನ್ನು ಎಂ ಎನ್ ಎಸ್ ಕಾರ್ಯಕರ್ತರು ಥಳಿಸಿದ ಬಳಿಕ ಭಾಷಾ ವಿವಾದವು ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾಯಂದರ್ ನಲ್ಲಿಯ ವ್ಯಾಪಾರಿಗಳು ದಾಳಿಕೋರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಬಳಿಕ ಏಳು ಎಂಎನ್‌ಎಸ್ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಎಕ್ಸ್ ಪೋಸ್ಟ್‌ನಲ್ಲಿ ದಾಳಿಕೋರರನ್ನು ದುಬೆ ತೀವ್ರ ತರಾಟೆಗೆತ್ತಿಕೊಂಡಿದ್ದರು. ಆದರೆ ಅವರು ಬಳಸಿದ್ದ ಪದಗಳು ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿಗೆ ಹಿನ್ನಡೆಯನ್ನುಂಟು ಮಾಡಿತ್ತು.
‘ಮುಂಬೈನಲ್ಲಿ ಹಿಂದಿ ಭಾಷಿಕರನ್ನು ಥಳಿಸುತ್ತಿರುವವರೇ, ನಿಮಗೆ ಧೈರ್ಯವಿದ್ದರೆ ಮಹಾರಾಷ್ಟ್ರದಲ್ಲಿರುವ ಉರ್ದು ಭಾಷಿಕರನ್ನು ಥಳಿಸಲು ಪ್ರಯತ್ನಿಸಿ. ತನ್ನ ಸ್ವಂತ ಮನೆಯಲ್ಲಿ ನಾಯಿಯೂ ಹುಲಿಯಾಗಿರುತ್ತದೆ. ಯಾರು ನಾಯಿ ಮತ್ತು ಯಾರು ಹುಲಿ ಎನ್ನುವುದನ್ನು ನೀವೇ ನಿರ್ಧರಿಸಿ ’ ಎಂದು ದುಬೆ ಕುಟುಕಿದ್ದಾರೆ
ದುಬೆಯವರ ಹೇಳಿಕೆಗಳು ಅವಿವೇಕದ್ದಾಗಿವೆ ಎಂದು ಬಣ್ಣಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅವು ಜನರ ಮನಸ್ಸುಗಳಲ್ಲಿ ಗೊಂದಲವನ್ನು ಹುಟ್ಟು ಹಾಕುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.