UGC NET JRF ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ನಲ್ಲಿ ತೇರ್ಗಡೆಯಾದ ಅನಂ ಝಾಫರ್
ಅನಂ ಝಾಫರ್ | PC : siasat.com
ಹೈದರಾಬಾದ್: UGC NET JRF ಪರೀಕ್ಷೆಯಲ್ಲಿ ಅನಂ ಝಾಫರ್ ಪ್ರಥಮ ರ‍್ಯಾಂಕ್ ನಲ್ಲಿ ತೇರ್ಗಡೆಯಾಗಿದ್ದು, ಈ ಸಾಧನೆಗೈದ ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಪ್ರಪ್ರಥಮ ವಿದ್ಯಾರ್ಥಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಸಿಂಗಲ್ ಪೇರೆಂಟ್ ಆಗಿರುವ ತಾಯಿಯ ಆರೈಕೆಯಲ್ಲಿ ಬೆಳೆದಿರುವ ಅನಂ ಝಾಫರ್ ರ ಈ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
25 ವರ್ಷದ ಅನಂ ಝಾಫರ್ ಪರೀಕ್ಷೆಯಲ್ಲಿ ಶೇ. 100ರಷ್ಟು ಅಂಕಗಳನ್ನು ಗಳಿಸಿದ್ದಾರೆ. ತಮ್ಮ ಪುತ್ರಿಯ ಈ ಅದ್ವಿತೀಯ ಸಾಧನೆ ತಿಳಿದು ಬಿಹಾರದ ದರ್ಭಾಂಗ ಜಿಲ್ಲೆಯ ಚಂದನ್ ಪಟ್ಟಿ ಗ್ರಾಮದಲ್ಲಿ ವಾಸಿಸುತ್ತಿರುವ ಅನಂ ಝಾಫರ್ ರ ತಾಯಿ ರೆಹಾನಾ ಖತೂನ್ ಗದ್ಗದಿತರಾಗಿದ್ದಾರೆ. ಅನಂ ಝಾಫರ್ ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದಲ್ಲಿ ಎಂ.ಎಡ್ ಸ್ನಾತಕೋತ್ತರ ಪದವಿಯ ನಾಲ್ಕನೆ ಸೆಮಿಸ್ಟರ್ ನ ಕೊನೆಯ ಹಂತದಲ್ಲಿದ್ದಾರೆ.
UGC NET JRF ಪರೀಕ್ಷೆಯಲ್ಲಿ ಅನಂ ಝಾಫರ್ ಪ್ರಥಮ ರ‍್ಯಾಂಕ್ ನಲ್ಲಿ ತೇರ್ಗಡೆಯಾಗಿರುವ ಸುದ್ದಿ ಹೊರ ಬೀಳುತ್ತಿದ್ದಂತೆಯೆ, ಬುಧವಾರ ವಿಶೇಷ ಸಮಾರಂಭ ಆಯೋಜಿಸಿದ್ದ ಶಿಕ್ಷಣ ಮತ್ತು ತರಬೇತಿ ಇಲಾಖೆ, ಅವರನ್ನು ಆತ್ಮೀಯವಾಗಿ ಸನ್ಮಾನಿಸಿತು. ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು ಈ ಸಂಭ್ರಮಾಚರಣೆಯ ವೇಳೆ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಭಾಗವಹಿಸಿದ್ದ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಅನಂ ಝಾಫರ್ ರ ಅರ್ಪಣಾ ಮನೋಭಾವ, ಪರಿಶ್ರಮ ಹಾಗೂ ಬದ್ಧತೆಯನ್ನು ಶ್ಲಾಘಿಸಿದರು. ಸಂಶೋಧನಾರ್ಥಿಗಳಿಗೆ ಅವರ ಸಾಧನೆ ಒಂದು ಮಾದರಿ ಎಂದು ಅವರೆಲ್ಲ ಪ್ರಶಂಸಿಸಿದರು.
ಅನಂ ಝಾಫರ್ ರ ಸಾಧನೆಯನ್ನು ಪ್ರಶಂಶಿಸಿದ ವಿಭಾಗದ ಮುಖ್ಯಸ್ಥ ಪ್ರೊ. ಶಹೀನ್ ಎ. ಶೇಕ್, “ಅನಂ ಝಾಫರ್ ರ ಸಾಧನೆಯು ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿಶ್ವದವಿದ್ಯಾಲಯದಲ್ಲಿನ ಉತ್ಕೃಷ್ಟ ಶೈಕ್ಷಣಿಕ ಗುಣಮಟ್ಟ ಹಾಗೂ ಸಂಶೋಧನಾ ಸಂಸ್ಕೃತಿಗೆ ಪುರಾವೆಯಾಗಿದೆ. ಆಕೆಯ ಯಶಸ್ಸು ಉತ್ಕೃಷ್ಟ ಸಾಧನೆಯ ಗುರಿ ಹೊಂದಿರುವ ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿದೆ” ಎಂದು ಹೇಳಿದ್ದಾರೆ.
ಅನಂ ಝಾಫರ್ ಅಲ್ಲದೆ, UGC NET JRF ಪರೀಕ್ಷೆಗೆ ಯಶಸ್ವಿಯಾಗಿ ಅರ್ಹತೆ ಪಡೆದಿರುವ ಇತರ ವಿದ್ಯಾರ್ಥಿಗಳನ್ನೂ ಈ ವೇಳೆ ಸನ್ಮಾನಿಸಲಾಯಿತು. ಅವರ ಸಾಧನೆಯನ್ನು ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಸರ ಹಾಗೂ ಸಿಬ್ಬಂದಿ ವರ್ಗದ ಅರ್ಪಣಾ ಮನೋಭಾವದ ಬೋಧನೆಯ ಸಾಮೂಹಿಕ ಯಶಸ್ಸನ್ನಾಗಿ ಆಚರಿಸಲಾಯಿತು.
ಅನಂ ಝಾಫರ್ ಕೇವಲ ಎಂಟು ವರ್ಷದ ಬಾಲಕಿಯಾಗಿದ್ದಾಗ ಆಕೆಯ ತಾಯಿ ತನ್ನ ಪತಿಯಿಂದ ವಿಚ್ಛೇದನಗೊಂಡಿದ್ದರು. ಖಾಸಗಿ ಶಾಲೆಯೊಂದರಲ್ಲಿ ಮಾಸಿಕ 800 ರೂ. ವೇತನಕ್ಕೆ ಶಿಕ್ಷಕಿಯಾಗಿ ಸೇರ್ಪಡೆಯಾಗಿದ್ದ ಅವರು, ಕೇಂದ್ರೀಯ ಶಿಕ್ಷಣ ಮಂಡಳಿಯಡಿ ಕಾರ್ಯನಿರ್ವಹಿಸುವ ಶಾಲೆಯೊಂದಕ್ಕೆ ತಮ್ಮ ಪುತ್ರಿಯನ್ನು ದಾಖಲಿಸಿದ್ದರು.
ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಮೂಲಗಳ ಪ್ರಕಾರ, ಅನಂ ಝಾಫರ್ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾಗ, ಆಕೆಯ ಚಿಕ್ಕಪ್ಪ(ತಂದೆಯ ತಮ್ಮ)ನನ್ನು ಹೊರತುಪಡಿಸಿ ಮತ್ಯಾರೂ ಆಕೆಯ ನೆರವಾಗಿರಲಿಲ್ಲ. ಕ್ಲಿಷ್ಟಕರ ಸಾಮಾಜಿಕ ಹಾಗೂ ಆರ್ಥಿಕ ಹಾದಿಯನ್ನು ಸವೆಸಿದ ಆಕೆಯ ತಾಯಿ, ದರ್ಭಾಂಗದಲ್ಲಿರುವ ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಶಿಕ್ಷಕರ ಶಿಕ್ಷಣ ಕೇಂದ್ರದಲ್ಲಿ ಅನಂ ಝಾಫರ್ ರನ್ನು ಬಿಎಡ್ ಪದವಿಗೆ ದಾಖಲಿಸಿದ್ದರು. ಇದರ ಬೆನ್ನಿಗೇ ಆಕೆ ಹೈದರಾಬಾದ್ ನಲ್ಲಿರುವ ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದಲ್ಲಿ ಎಂಎಡ್ ಸ್ನಾತಕೋತ್ತರ ಪದವಿಗೆ ಸೇರ್ಪಡೆಯಾಗಿದ್ದರು.
ಈ ನಡುವೆ, ಹೈದರಾಬಾದ್ ನ ಖಾಸಗಿ ಸಂಸ್ಥೆಯೊಂದರಲ್ಲಿ ತಂತ್ರಜ್ಞರಾಗಿ ದುಡಿಯುತ್ತಿರುವ ಜೋಹರ್ ಅಲಿ ಎಂಬುವವರನ್ನು ಅನಂ ಝಾಪರ್ ವಿವಾಹವಾದರು. ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ಸಮೀಪವಿರುವ ಲಿಂಗಂಪಲ್ಲಿ ಪ್ರದೇಶದಲ್ಲಿ ಅನಂ ಝಾಪರ್ ದಂಪತಿಗಳು ವಾಸಿಸುತ್ತಿದ್ದಾರೆ.
ನನ್ನ ತಾಯಿಯೇನಾದರೂ ಪ್ರತಿ ಹಂತದಲ್ಲೂ ನನಗೆ ಪ್ರೋತ್ಸಾಹಿಸದೆ ಹೋಗಿದ್ದರೆ, ನಾನು ಈ ಕಷ್ಟಕರ ಹಾದಿಯನ್ನು ಕ್ರಮಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅನಂ ಝಾಫರ್ ಸ್ಮರಿಸಿದ್ದಾರೆ. “ಈಗ ನನ್ನ ತಾಯಿಯೊಂದಿಗೆ ನನ್ನ ಪತಿಯೂ ಸೇರಿಕೊಂಡಿದ್ದು, ನಾನು ಪಿಎಚ್ಡಿ ಪೂರೈಸಬೇಕು ಎಂದು ಆಶಿಸುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಸಂಶೋಧನಾ ವಿದ್ಯಾರ್ಥಿಯಾಗಿರುವ ಅನಂ ಝಾಫರ್ ಮಾಸಿಕ 45,000 ರೂ. ವಿದ್ಯಾರ್ಥಿ ಭತ್ಯೆ ಪಡೆಯುವ ನಿರೀಕ್ಷೆ ಇದೆ.
ತನಗೆ ನಿರಂತರವಾಗಿ ಬೆಂಬಲ ಹಾಗೂ ಪ್ರೋತ್ಸಾಹ ನೀಡಿದ ತನ್ನ ತಾಯಿ, ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಕುಟುಂಬಕ್ಕೆ ಧನ್ಯವಾದ ಸಲ್ಲಿಸಿರುವ ಅನಂ ಝಾಫರ್, ನನ್ನ ಯಶಸ್ಸಿಗೆ ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಸರ ಹಾಗೂ ನನ್ನ ಪ್ರಾಧ್ಯಾಪಕರ ಮಾರ್ಗದರ್ಶನ ಕಾರಣ ಎಂದು ಹೇಳಿದ್ದಾರೆ.
ಸೌಜನ್ಯ: siasat.com