×
Ad

‘Live-in’ ಸಂಬಂಧ ಕಾನೂನು ಬಾಹಿರವಲ್ಲ; ಅಲಹಾಬಾದ್ ಹೈಕೋರ್ಟ್

Update: 2025-12-19 21:40 IST

ಅಲಹಾಬಾದ್ ಹೈಕೋರ್ಟ್ | Photo Credit : PTI 

ಅಲಹಾಬಾದ್,ಡಿ.19: ‘ಲಿವ್ ಇನ್ ರಿಲೇಶನ್‌ಶಿಪ್’ (ವಿವಾಹವಾಗದೆ ಜೊತೆಯಾಗಿ ವಾಸಿಸುವುದು) ಕಾನೂನುಬಾಹಿರವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಬುಧವಾರ ತೀರ್ಪು ನೀಡಿದ್ದು, ವೈವಾಹಿಕ ಸ್ಥಾನಮಾನ ಪರಿಗಣಿಸದೆ ದೇಶದ ಯಾವುದೇ ಪೌರನನ್ನು ಬೆದರಿಕೆಗಳು ಹಾಗೂ ಹಸ್ತಕ್ಷೇಪದಿಂದ ರಕ್ಷಿಸುವುದು ಆಡಳಿತದ ಬದ್ಧತೆಯಾಗಿದೆ ಎಂದು ಪ್ರತಿಪಾದಿಸಿದೆ.

ವಿವಾಹವಾಗದೆ ಜೊತೆಯಾಗಿ ವಾಸಿಸುವುದು ಅಪರಾಧವಲ್ಲವೆಂದು ತೀರ್ಪು ನೀಡಿದ ನ್ಯಾಯಮೂರ್ತಿ ವಿವೇಕ್ ಕುಮಾರ್ ಸಿಂಗ್ ಅವರು, ಲಿವ್ ಇನ್ ರಿಲೇಶನ್‌ ನಲ್ಲಿರುವ ವಯಸ್ಕರು, ಸಂವಿಧಾನವು ಖಾತರಿಪಡಿಸಿರುವ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಹಾಗೂ ಅವರ ಪ್ರಾಣಕ್ಕೆ ರಕ್ಷಣೆಯನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.

‘‘ ಲಿವ್ ಇನ್ ರಿಲೇಶನ್‌ ಶಿಪ್‌ನ ಪರಿಕಲ್ಪನೆ ಎಲ್ಲರಿಗೂ ಸ್ವೀಕಾರಾರ್ಹವಲ್ಲದೆ ಇರಬಹುದು. ಆದರೆ ಅಂತಹ ಸಂಬಂಧವು ಕಾನೂನುಬಾಹಿರವೆಂದು ಅಥವಾ ವಿವಾಹದ ಪಾವಿತ್ರ್ಯತೆ ಇಲ್ಲದೆ ಜೊತೆಯಾಗಿ ಬಾಳುವುದು ಅಪರಾಧವೆಂದು ಹೇಳಲು ಸಾಧ್ಯವಿಲ್ಲ ’’ಎಂದು ನ್ಯಾಯಮೂರ್ತಿ ವಿವೇಕ್ ಕುಮಾರ್ ಸಿಂಗ್ ಅವರು ಅಭಿಪ್ರಾಯಿಸಿದರು. ತನ್ನ ಸಂಗಾತಿಯನ್ನು ಹಾಗೂ ವಾಸ್ತವ್ಯ ಸ್ಥಳವನ್ನು ಆಯ್ಕೆ ಮಾಡುವುದು ವಯಸ್ಕ ವ್ಯಕ್ತಿಯ ಸ್ವಾಯತ್ತತೆಯಾಗಿದೆ ಎಂದು ಸಿಂಗ್ ಅವರು ಪ್ರತಿಪಾದಿಸಿದರು.

ದೇಶದ ಸಾಮಾಜಿಕ ಚೌಕಟ್ಟನ್ನು ಬಲಿಗೊಟ್ಟು ಲಿವ್ ಇನ್ ರಿಲೇಶನ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂಬ ರಾಜ್ಯಸರಕಾರದ ವಕೀಲರ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

ಲಿವ್ ಇನ್ ರಿಲೇಶನ್‌ಶಿಪ್‌ ಗೆ ಕಾನೂನಾತ್ಮಕವಾಗಿ ಮಾನ್ಯತೆ ನೀಡಲು ಸಾಧ್ಯವಿಲ್ಲ. ಮನಬಂದಂತೆ ಈ ಒಪ್ಪಂದವನ್ನು ಕೊನೆಗೊಳಿಸಬಹುದಾದ ಈ ಸಂಬಂಧದಿಂದ ಜನಿಸುವ ಮಕ್ಕಳ ಸ್ಥಾನಮಾನ ಸೇರಿದಂತೆ ವಿವಿ ಕಾನೂನು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ವಾದಿಸಿದ್ದರು.

ತಮಗೆ ಜೀವಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ ಕೋರಿ ಲಿವ್‌ಇನ್ ರಿಲೇಶನ್‌ಶಿಪ್‌ನಲ್ಲಿರುವ 12 ಮಂದಿ ಮಹಿಳೆಯರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.

ತಮಗೆ ರಕ್ಷಣೆ ನೀಡುವಂತೆ ಕೋರಿ ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಲೇರಿದರೂ,ಯಾವುದೇ ಸಹಾಯ ದೊರೆತಿಲ್ಲವೆಂದು ಅವರು ಹೇಳಿದರು.

‘‘ಪ್ರಾಯಪ್ರಬುದ್ಧನಾದ ವ್ಯಕ್ತಿಯು ತನ್ನ ಸಂಗಾತಿಯನ್ನು ಆಯ್ಕೆ ಮಾಡಿದಲ್ಲಿ.ಅದಕ್ಕೆ ಇತರ ಯಾವುದೇ ವ್ಯಕ್ತಿಯು, ಆತ ಕುಟುಂಬಸದಸ್ಯನೇ ಆಗಿರಲಿ ಆಕ್ಷೇಪಿಸುವಂತಿಲ್ಲ ಅಥವಾ ಅವರು ಶಾಂತಿಯುತವಾಗಿ ಬಾಳುವುದಕ್ಕೆ ಅಡ್ಡಿಪಡಿಸುವಂತಿಲ್ಲ’’ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News