ಕೇನ್ಸ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟನೆಗಾಗಿ ಪ್ರಶಸ್ತಿ ಪಡೆದ ಅನಸೂಯ ಸೇನಗುಪ್ತಾ
PC : newindianexpress.com
ಹೊಸದಿಲ್ಲಿ: ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಟನೆಗಾಗಿ ಅತ್ಯುನ್ನತ ಪ್ರಶಸ್ತಿ ಪಡೆದಿರುವ ಅನಸೂಯ ಸೇನಗುಪ್ತಾ ಈ ಪ್ರಶಸ್ತಿ ಪಡೆದ ಪ್ರಥಮ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗೋವಾ ನಿವಾಸಿಯಾಗಿರುವ ಅನಸೂಯ ಅವರು ಪ್ರೊಡಕ್ಷನ್ ಡಿಸೈನರ್ ಆಗಿದ್ದು, “ದಿ ಶೇಮ್‌ಲೆಸ್” ಚಿತ್ರದಲ್ಲಿ ತಮ್ಮ ನಟನೆಗಾಗಿ ಅನ್ ಸರ್ಟೇನ್ ರಿಗಾರ್ಡ್ ಪ್ರಶಸ್ತಿ ಪಡೆದಿದ್ದಾರೆ.
ಬಲ್ಗೇರಿಯನ್-ಅಮೆರಿಕನ್ ಚಿತ್ರ ತಯಾರರಕ ಕೊನ್‌ಸ್ಟಾಂಟಿನ್ ಬೊಜನೋವ್ ಅವರು ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಈ ಚಲನಚಿತ್ರದಲ್ಲಿ ಅನಸೂಯ ಅವರು ರೇಣುಕಾ ಪಾತ್ರಧಾರಿಯಾಗಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬನನ್ನು ರಾತ್ರಿಯ ನಟ್ಟನಡುವೆ ಇರಿದು ಹತ್ಯೆಗೈದು ದಿಲ್ಲಿಯ ವೇಶ್ಯಾಗೃಹವೊಂದರಿಂದ ಪರಾರಿಯಾಗುವ ಮಹಿಳೆಯ ಪಾತ್ರವನ್ನು ಅವರು ಈ ಚಿತ್ರದಲ್ಲಿ ನಿಭಾಯಿಸಿದ್ದಾರೆ. ನಂತರ ಆಕೆ ಉತ್ತರ ಭಾರತದ ಲೈಂಗಿಕ ಕಾರ್ಯಕರ್ತೆಯರ ಒಂದು ಸಮುದಾಯದಲ್ಲಿ ಆಶ್ರಯ ಪಡೆಯುತ್ತಾಳೆ. ಅಲ್ಲಿ ಆಕೆ ದೇವಿಕಾ (ಓಮರ ಶೆಟ್ಟಿ) ಎಂಬ ಯುವತಿಯ ಪರಿಚಯವಾಗುತ್ತದೆ. ಅವರ ಸ್ನೇಹ ನಂತರ ಪ್ರಣಯಕ್ಕೆ ದಾರಿ ಮಾಡಿಕೊಡುತ್ತದೆ. ಕಾನೂನಿನಿಂದ ತಪ್ಪಿಸಿಕೊಳ್ಳುವ ಅಪಾಯಕಾರಿ ಪಯಣ ಆರಂಭಿಸಿ ಸ್ವಾತಂತ್ರ್ಯದತ್ತ ಅವರು ಸಾಗುವ ಚಿತ್ರಣ ಈ ಸಿನಿಮಾದಲ್ಲಿದೆ.
ಅನಸೂಯ ತಮ್ಮ ಪ್ರಶಸ್ತಿಯನ್ನು ಕ್ವೀರ್ ಸಮುದಾಯ ಮತ್ತು ಅದರ ಹೋರಾಟಕ್ಕೆ ಸಮರ್ಪಿಸಿದ್ದಾರೆ.
ಮೈಸೂರಿನ ಚಿದಾನಂದ ನಾಯ್ಕ್ ನಿರ್ದೇಶನದ ಕನ್ನಡ ಕಿರುಚಿತ್ರ “ಸನ್‌ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ” ಕೇನ್ಸ್‌ನ ಲಾ ಸಿನೆಫ್ ಪ್ರಶಸ್ತಿ ಪಡೆದಿದ್ದರೆ, ಮೀರತ್ ಮೂಲದ ಮಾನ್ಸಿ ಮಹೇಶ್ವರಿ ಅವರ ಬನ್ನಿಹುಡ್ ಈ ವಿಭಾಗದಲ್ಲಿ ಮೂರನೇ ಅತ್ಯುತ್ತಮ ಸಿನೆಮಾ ಪ್ರಶಸ್ತಿ ಪಡೆದಿದೆ.