×
Ad

ತೆಲಂಗಾಣದ ರಾಜ್ಯಗೀತೆಯ ರಚನೆಕಾರ, ಖ್ಯಾತ ಕವಿ ಅಂದೆಶ್ರೀ ನಿಧನ

Update: 2025-11-10 12:57 IST

ಅಂದೆಶ್ರೀ (Photo: X)

ಹೈದರಾಬಾದ್‌: “ಜಯ ಜಯಹೇ ತೆಲಂಗಾಣ, ಜನನಿ ಜಯ ಕೇತನಂ” ಎಂಬ ತೆಲಂಗಾಣದ ರಾಜ್ಯಗೀತೆಯನ್ನು ರಚಿಸಿ ಜನಮನದಲ್ಲಿ ಉಳಿದ ಖ್ಯಾತ ಕವಿ ಮತ್ತು ಗೀತರಚನೆಕಾರ ಅಂದೆಶ್ರೀ (64) ಸೋಮವಾರ ಬೆಳಿಗ್ಗೆ ನಿಧನರಾದರು.

ಅಂದೆಶ್ರೀ (ಮೂಲ ಹೆಸರು ಅಂದೆ ಯೆಲ್ಲಣ್ಣ) ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಹೈದರಾಬಾದ್‌ ನ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮುಂಜಾನೆ ಕೊನೆಯುಸಿರೆಳೆದರು. ರಾಜ್ಯ ಸರ್ಕಾರವು ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸಿದ್ಧತೆ ನಡೆಸಿದೆ.

ತೆಲಂಗಾಣ ಪ್ರತ್ಯೇಕ ರಾಜ್ಯ ಚಳುವಳಿಯ ಸಮಯದಲ್ಲಿ ಲಕ್ಷಾಂತರ ಜನರ ಹೋರಾಟದ ಉತ್ಸಾಹಕ್ಕೆ ಪ್ರೇರಣೆ ನೀಡಿದ ಅಂದೆ ಶ್ರೀ ಅವರ “ಜಯ ಜಯಹೇ ತೆಲಂಗಾಣ” ಗೀತೆ ಬಳಿಕ ರಾಜ್ಯದ ಅಧಿಕೃತ ಗೀತೆಯಾಗಿ ಘೋಷಿಸಲ್ಪಟ್ಟಿತು. ಈ ಕವಿತೆಯ 12 ಚರಣಗಳು ಜನರ ಹೃದಯದಲ್ಲಿ ಪ್ರತ್ಯೇಕ ರಾಜ್ಯದ ಕನಸಿನ ಕಿಡಿ ಹಚ್ಚಿತ್ತು.

1961ರಲ್ಲಿ ಸಿದ್ದಿಪೇಟೆ ಜಿಲ್ಲೆಯ ರೆಬರ್ತಿ ಗ್ರಾಮದಲ್ಲಿ ಜನಿಸಿದ ಅಂದೆ ಶ್ರೀ ಅವರು ಬಾಲ್ಯದಲ್ಲೇ ಅನಾಥರಾದರು. ಶಾಲಾ ಶಿಕ್ಷಣವಿಲ್ಲದ ಅವರು ಕುರುಬನಾಗಿಯೂ, ಕಟ್ಟಡ ಕಾರ್ಮಿಕನಾಗಿಯೂ ದುಡಿದು ಬದುಕು ಕಟ್ಟಿಕೊಂಡರು. ಆದರೆ ಸಾಹಿತ್ಯದ ಮೇಲಿನ ಪ್ರೀತಿ, ಹಠ ಮತ್ತು ಪ್ರತಿಭೆಯಿಂದ ಅವರು ಜನರ ಕವಿಯಾಗಿ ಮೆರೆದರು.

ಅಂದೆ ಶ್ರೀ ಬರೆದ “ಮಾಯಾಮೈಪೋತುನ್ನಡಮ್ಮ ಮನಿಷಣವಡು” (ಚಿತ್ರ: ಎರ್ರಾ ಸಮುದ್ರಂ) ಹಾಡು ಅಪಾರ ಮೆಚ್ಚುಗೆ ಪಡೆದಿತು. ಈ ಕಾವ್ಯವನ್ನು 2009ರಲ್ಲಿ ಆಂಧ್ರಪ್ರದೇಶ ವಿಶ್ವವಿದ್ಯಾಲಯವು ಪದವಿ ಪಠ್ಯಕ್ರಮದಲ್ಲಿ ಸೇರಿಸಿತ್ತು. ಗಂಗಾ ಚಿತ್ರದ ಗೀತೆಗೆ ಅವರು 2006ರಲ್ಲಿ ನಂದಿ ಪ್ರಶಸ್ತಿ ಪಡೆದಿದ್ದರು.

ತೆಲಂಗಾಣ ಚಳುವಳಿ ಹಾಗೂ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಕಾಕತೀಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿತ್ತು. ಇದೇ ವರ್ಷ (ಜೂನ್ 2025) ರಾಜ್ಯ ರಚನಾ ದಿನಾಚರಣೆಯ ಸಂದರ್ಭದಲ್ಲಿ ಸರ್ಕಾರವು ಅವರಿಗೆ 1 ಕೋಟಿ ರೂಪಾಯಿ ನಗದು ಬಹುಮಾನ ನೀಡಿ ಸನ್ಮಾನಿಸಿತ್ತು.

“ತೆಲಂಗಾಣದ ಸಾಹಿತ್ಯ ಲೋಕದ ಅತ್ಯುನ್ನತ ಧ್ವನಿಯೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ. ಅಂದೆ ಶ್ರೀ ಅವರ ಕಾವ್ಯ ರಾಜ್ಯದ ಆತ್ಮವನ್ನು ಪ್ರತಿಬಿಂಬಿಸುತ್ತದೆ,” ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. ಅಂತ್ಯಕ್ರಿಯೆಯನ್ನು ರಾಜ್ಯ ಗೌರವಗಳೊಂದಿಗೆ ನೆರವೇರಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.

“ಅಂದೆ ಶ್ರೀ ಅವರ ಹಾಡುಗಳು ಚಳುವಳಿಯ ಚೈತನ್ಯವನ್ನು ಬಲಪಡಿಸಿದವು. ಅವರ ಕಾವ್ಯ ತೆಲಂಗಾಣದ ಸಾಂಸ್ಕೃತಿಕ ಇತಿಹಾಸದ ಹೃದಯಭಾಗವಾಗಿದೆ,” ಎಂದು ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಕವಿಯನ್ನು ನೆನಪಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News