×
Ad

ಕ್ರಿಕೆಟಿಗ ನಿತೀಶ್ ಕುಮಾರ್ ರೆಡ್ಡಿಗೆ 25 ಲಕ್ಷ ರೂ. ಬಹುಮಾನ ವಿತರಿಸಿದ ಆಂಧ್ರಪ್ರದೇಶ ಸಿಎಂ ನಾಯ್ಡು

Update: 2025-01-17 21:50 IST

ಎನ್.ಚಂದ್ರಬಾಬು ನಾಯ್ಡು ,  ನಿತೀಶ್ ಕುಮಾರ್ ರೆಡ್ಡಿ | PC ; @ncbn

ಅಮರಾವತಿ: ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಪರವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಕ್ರಿಕೆಟಿಗ ನಿತೀಶ್ ಕುಮಾರ್ ರೆಡ್ಡಿಗೆ 25 ಲಕ್ಷ ರೂ. ಚೆಕ್ ಅನ್ನು ಹಸ್ತಾಂತರಿಸಿದರು.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಮುಕ್ತಾಯಗೊಂಡ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಭಾರತೀಯ ಆಲ್ ರೌಂಡರ್ ಆದ ನಿತೀಶ್ ಕುಮಾರ್ ರೆಡ್ಡಿ ಗಮನ ಸೆಳೆಯುವ ಪ್ರದರ್ಶನ ತೋರಿದ್ದರು.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಚಂದ್ರಬಾಬು ನಾಯ್ಡು, “ಇಂದು ನಮ್ಮದೇ ರಾಜ್ಯದ ಅದ್ಭುತ ಯುವ ಕ್ರಿಕೆಟ್ ಪ್ರತಿಭೆ ನಿತೀಶ್ ಕುಮಾರ್ ರೆಡ್ಡಿಯನ್ನು ಭೇಟಿಯಾದೆ. ನಿತೀಶ್ ಕುಮಾರ್ ರೆಡ್ಡಿ ನಿಜಕ್ಕೂ ತೆಲುಗು ಸಮುದಾಯದ ಹೊಳೆಯುವ ತಾರೆಯಾಗಿದ್ದು, ಜಾಗತಿಕ ವೇದಿಕೆಯ ಮೇಲೆ ಭಾರತಕ್ಕೆ ಹೆಮ್ಮೆಯನ್ನು ತಂದಿದ್ದಾರೆ. ಆತನ ಕ್ರಿಕೆಟ್ ಪಯಣದಲ್ಲಿ ಆತನ ಪೋಷಕರು ನೀಡಿದ್ದ ಪ್ರೋತ್ಸಾಹಕ್ಕೆ ಅವರನ್ನು ಪ್ರಶಂಶಿಸಿದೆ. ಆತ ಮತ್ತಷ್ಟು ಶತಕಗಳನ್ನು ಗಳಿಸಲಿ ಹಾಗೂ ಮುಂಬುರವ ದಿನಗಳಲ್ಲಿ ತನ್ನ ಯಶಸ್ಸನ್ನು ಮುಂದುವರಿಸಲಿ ಎಂದು ಹಾರೈಸಿದೆ” ಎಂದು ಬರೆದುಕೊಂಡಿದ್ದಾರೆ.

ರಾಜ್ಯ ಸರಕಾರದ ಪರವಾಗಿ ನಿತೀಶ್ ಕುಮಾರ್ ರೆಡ್ಡಿಗೆ ಮನೆಯೊಂದನ್ನು ಮಂಜೂರು ಮಾಡುವುದಾಗಿಯೂ ಚಂದ್ರಬಾಬು ನಾಯ್ಡು ಭರವಸೆ ನೀಡಿದರು ಎಂದು ವರದಿಯಾಗಿದೆ.

ನಂತರ, ನಿತೀಶ್ ಕುಮಾರ್ ರೆಡ್ಡಿ, ಸಚಿವ ನರ ಲೋಕೇಶ್ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ರಾಜ್ಯದ ಯುವ ಕ್ರಿಕೆಟಿಗರಿಗೆ ನಿತೀಶ್ ಕುಮಾರ್ ರೆಡ್ಡಿ ಒಂದು ಸ್ಫೂರ್ತಿ ಎಂದು ಅವರು ಶ್ಲಾಘಿಸಿದರು.

ವಿಶಾಖಪಟ್ಟಣಂ ನಿವಾಸಿಯಾದ ನಿತೀಶ್ ಕುಮಾರ್ ರೆಡ್ಡಿ, ಆಸ್ಟ್ರೇಲಿಯಾದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ನಂತರ, ತಿರುಮಲ ಬೆಟ್ಟದ ಮೆಟ್ಟಿಲುಗಳ ಮೇಲೆ ಮಂಡಿಯೂರಿ ವೆಂಕಟೇಶ್ವರ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News