×
Ad

ಆಂಧ್ರಪ್ರದೇಶ ಕಾಲ್ತುಳಿತ ಪ್ರಕರಣ : ನನ್ನ ಭೂಮಿ, ನನ್ನ ದೇವಸ್ಥಾನ, ನಾನೇಕೆ ಪೊಲೀಸರಿಗೆ ಮಾಹಿತಿ ನೀಡಬೇಕು? : ಹರಿ ಮುಕುಂದ ಪಾಂಡೆ

Update: 2025-11-02 21:09 IST

ಹರಿ ಮುಕುಂದ ಪಾಂಡೆ | Photo Credit : PTI

ಕಾಶಿಬುಗ್ಗ(ಶ್ರೀಕಾಕುಳಂ): ಶನಿವಾರ ಕಾಲ್ತುಳಿತ ದುರಂತದಲ್ಲಿ ಒಂಭತ್ತು ಜನರು ಮೃತಪಟ್ಟ ಕಾಶಿಬುಗ್ಗದಲ್ಲಿಯ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏಕಾದಶಿ ಕಾರ್ಯಕ್ರಮದ ಬಗ್ಗೆ ಪೊಲೀಸರಿಗೆ ಮೊದಲೇ ಮಾಹಿತಿ ನೀಡಿದ್ದರೆ ಅವರು ಸೂಕ್ತ ವ್ಯವಸ್ಥೆಗಳನ್ನು ಮಾಡುತ್ತಿದ್ದರು ಎಂಬ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ದೇವಸ್ಥಾನದ ನಿರ್ಮಾತೃ ಹರಿ ಮುಕುಂದ ಪಾಂಡೆ(94) ಅವರು ‘ನನ್ನ ಭೂಮಿ, ನನ್ನ ದೇವಸ್ಥಾನ, ನಾನೇಕೆ ಪೋಲಿಸರಿಗೆ ಮಾಹಿತಿ ನೀಡಬೇಕು?’ ಎಂದು ಪ್ರಶ್ನಿಸಿದ್ದಾರೆ.

ವೆಂಕಟೇಶ್ವರ ಸ್ವಾಮಿಯ ಭಕ್ತರಾಗಿರುವ ಪಾಂಡೆ ಕೇವಲ ನಾಲ್ಕು ತಿಂಗಳುಗಳ ಹಿಂದೆ ತಿರುಮಲದ ಭವ್ಯ ವೆಂಕಟೇಶ್ವರ ಸ್ವಾಮಿ ಮಂದಿರದ ಮಾದರಿಯಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದ್ದು, ಅದು ಸ್ಥಳೀಯವಾಗಿ ‘ಚಿನ್ನ ತಿರುಪತಿ’ ಅಥವಾ ‘ಮಿನಿ ತಿರುಪತಿ’ ಎಂದೇ ಖ್ಯಾತಿ ಪಡೆದಿದೆ. ಏಕಾದಶಿ ದಿನವಾದ ಶನಿವಾರ ಕಾಲ್ತುಳಿತ ಘಟನೆ ಸಂಭವಿಸಿದಾಗ ದೇವಸ್ಥಾನದ ನಿರ್ಮಾಣ ಕಾರ್ಯವಿನ್ನೂ ಪೂರ್ಣಗೊಂಡಿರಲಿಲ್ಲ.

ಕಾಶಿಬುಗ್ಗ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಿನ್ನೆ ಭಾರೀ ಜನದಟ್ಟಣೆಯಿಂದಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಎಂಟು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಒಂಭತ್ತು ಭಕ್ತರು ಮೃತಪಟ್ಟಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪಾಂಡಾ, ‘ನಾನು ನನ್ನ ಖಾಸಗಿ ಭೂಮಿಯಲ್ಲಿ ದೇವಸ್ಥಾನವನ್ನು ನಿರ್ಮಿಸಿದ್ದೇನೆ. ನಾನೇಕೆ ಸ್ಥಳೀಯ ಆಡಳಿತಕ್ಕೆ ಅಥವಾ ಪೊಲೀಸರಿಗೆ ಮಾಹಿತಿಯನ್ನು ನೀಡಬೇಕು?’ ಎಂದು ಪ್ರಶ್ನಿಸಿದರು.

ದುರಂತಕ್ಕಾಗಿ ನಿನ್ನೆ ದೇವಸ್ಥಾನದ ಅಧಿಕಾರಿಗಳನ್ನು ದೂಷಿಸಿದ್ದ ನಾಯ್ಡು, ಅವರು ಮೊದಲೇ ಪೋಲಿಸರಿಗೆ ಮಾಹಿತಿ ನೀಡಿದ್ದರೆ ಜನದಟ್ಟಣೆಯನ್ನು ನಿರ್ವಹಿಸಲು ವ್ಯವಸ್ಥೆಯನ್ನು ಮಾಡಬಹುದಿತ್ತು ಎಂದು ಹೇಳಿದ್ದರು. ಈ ಪ್ರಕರಣದಲ್ಲಿ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿಯೂ ಅವರು ಭರವಸೆ ನೀಡಿದ್ದರು.

‘ನೀವು ಎಷ್ಟು ಪ್ರಕರಣಗಳನ್ನು ಬೇಕಾದರೂ ದಾಖಲಿಸಬಹುದು. ನನಗೆ ಸಮಸ್ಯೆಯಿಲ್ಲ’ ಎಂದು ಪ್ರತಿಪಾದಿಸಿದ ಪಾಂಡಾ, ‘ದೇವಸ್ಥಾನದಲ್ಲಿ ಸಾಮಾನ್ಯವಾಗಿ ಕಡಿಮೆ ಜನಸಂದಣಿ ಇರುತ್ತದೆ. ದೇವರ ದರ್ಶನದ ಬಳಿಕ ಭಕ್ತರು ಪ್ರಸಾದ ಸ್ವೀಕರಿಸಿ ತೆರಳುತ್ತಾರೆ. ನಾನು ಅವರ ಬಳಿ ಏನನ್ನೂ ಕೇಳುವುದಿಲ್ಲ. ನಾನು ನನ್ನ ಸ್ವಂತ ಹಣದಿಂದ ಆಹಾರ ಮತ್ತು ಪ್ರಸಾದವನ್ನು ಸಿದ್ಧಪಡಿಸುತ್ತೇನೆ. ಆದರೆ ನಿನ್ನೆ ಬೆಳಿಗ್ಗೆ ಒಂಭತ್ತು ಗಂಟೆಯ ವೇಳೆಗೆ ಜನಸಂದಣಿ ಇದ್ದಕ್ಕಿದ್ದಂತೆ ಹೆಚ್ಚಾಗಿತ್ತು. ನಾವು ಸಿದ್ಧಪಡಿಸಿದ್ದ ಪ್ರಸಾದ ಮುಗಿದಿತ್ತು. ಹೆಚ್ಚಿನ ಆಹಾರ ತಯಾರಿಸಲು ನಮಗೆ ಸಮಯವಿರಲಿಲ್ಲ. ಏಕಾದಶಿಯಂದು ಇಷ್ಟೊಂದು ಜನಸಂದಣಿಯನ್ನು ನಾನು ನಿರೀಕ್ಷಿಸಿರಲಿಲ್ಲ’ ಎಂದರು.

ದುರಂತದ ಬಳಿಕ ದೇವಸ್ಥಾನವನ್ನು ಮುಚ್ಚಲಾಗಿದೆ. ಪ್ರವೇಶ ದ್ವಾರಕ್ಕೆ ಬೀಗ ಜಡಿಯಲಾಗಿದ್ದು, ಆವರಣದಲ್ಲಿ ಈಗಲೂ ಪೋಲಿಸರನ್ನು ನಿಯೋಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News