ಆರ್ ಕಾಮ್ ಸಾಲ ಖಾತೆಯನ್ನು ವಂಚನೆ ಎಂದು ವರ್ಗೀಕರಿಸಲಿರುವ ಎಸ್‌ಬಿಐ: ಆರ್ ಬಿ ಐ ಗೆ ವರದಿಯಲ್ಲಿ ಅನಿಲ್ ಅಂಬಾನಿ ಹೆಸರು
ಅನಿಲ್ ಅಂಬಾನಿ | PTI
ಹೊಸದಿಲ್ಲಿ: ಆಗಸ್ಟ್ 2015ರಷ್ಟು ಹಿಂದಿನ ಪ್ರಕರಣದಲ್ಲಿ ರಿಲಯನ್ಸ್ ಕಮ್ಯುನಿಕೇಷನ್ಸ್(ಆರ್‌ಕಾಮ್)ನ ಸಾಲಖಾತೆಯನ್ನು ‘ವಂಚನೆ’ ಎಂದು ಆರ್‌ಬಿಐಗೆ ವರದಿಯನ್ನು ಸಲ್ಲಿಸಲು ಮತ್ತು ಅದರ ಹಿಂದಿನ ನಿರ್ದೇಶಕ ಅನಿಲ ಅಂಬಾನಿಯವರನ್ನು ವರದಿಯಲ್ಲಿ ಹೆಸರಿಸಲು ಎಸ್ ಬಿ ಐ ನಿರ್ಧರಿಸಿದೆ ಎಂದು ಕಂಪನಿಯು ಬಾಂಬೆ ಶೇರು ವಿನಿಮಯ ಕೇಂದ್ರ(ಬಿಎಸ್‌ಇ)ಕ್ಕೆ ಮಾಹಿತಿಯನ್ನು ಸಲ್ಲಿಸಿದೆ.
ಈ ಸಂಬಂಧ ತಾನು ಎಸ್ ಬಿ ಐ ನಿಂದ ಜೂನ್ 23, 2025ರಂದು ಪತ್ರವನ್ನು ಸ್ವೀಕರಿಸಿದ್ದೇನೆ ಎಂದು ಆರ್ ಕಾಮ್ ತಿಳಿಸಿದೆ.
ಬ್ಯಾಂಕಿನ ವಂಚನೆ ಗುರುತಿಸುವಿಕೆ ಸಮಿತಿ(ಎಫ್ ಐ ಸಿ)ಯ ಏಕಪಕ್ಷೀಯ ಆದೇಶ ಆಘಾತಕಾರಿಯಾಗಿದೆ ಎಂದು ಅಂಬಾನಿ ಹೇಳಿದ್ದಾರೆ.
ಅಂಬಾನಿಯವರನ್ನು ಪ್ರತಿನಿಧಿಸಿರುವ ಕಾನೂನು ಸಂಸ್ಥೆಯು ಎಸ್ ಬಿ ಐ ಗೆ ನೀಡಿರುವ ಉತ್ತರದಲ್ಲಿ, ಎಫ್ ಐ ಸಿ ಯ ಏಕಪಕ್ಷೀಯ ಆದೇಶವು ಆಘಾತಕಾರಿಯಾಗಿದೆ. ಅಂಬಾನಿಯವರ ಹಿಂದಿನ ಪತ್ರಕ್ಕೆ ಬ್ಯಾಂಕು ಒಂದು ವರ್ಷ ಕಾಲ ಉತ್ತರಿಸಿರಲಿಲ್ಲ. ಅಂಬಾನಿ ಕಂಪನಿಯ ಪೂರ್ಣಕಾಲಿಕ ನಿರ್ದೇಶಕರಾಗಿರಲಿಲ್ಲ,ಕಾರ್ಯ ನಿರ್ವಾಹಕೇತರ ನಿರ್ದೇಶಕರಾಗಿದ್ದರು. ಆರ್ ಕಾಮ್ ನ ದೈನಂದಿನ ವ್ಯವಹಾರಗಳು ಮತ್ತು ಕಾರ್ಯಾಚರಣೆಗೆ ಅವರು ಹೊಣೆಗಾರರಲ್ಲ ಎಂದು ಹೇಳಿದೆ.
ಅಂಬಾನಿಯವರು ವೈಯಕ್ತಿಕವಾಗಿ ಅಹವಾಲು ಸಲ್ಲಿಸಲು ಬ್ಯಾಂಕು ಅವರಿಗೆ ಅವಕಾಶ ನೀಡಿರಲಿಲ್ಲ ಮತ್ತು ಸಂಬಂಧಿತ ದಾಖಲೆಗಳನ್ನು ಅವರಿಗೆ ಒದಗಿಸಲಾಗಿರಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿರುವ ಕಾನೂನು ಸಂಸ್ಥೆಯು, ವಂಚನೆ ವರ್ಗೀಕರಣವನ್ನು ಹಿಂದೆಗೆದುಕೊಳ್ಳುವಂತೆ ಬ್ಯಾಂಕನ್ನು ಆಗ್ರಹಿಸಿದೆ.
ಪ್ರಸ್ತುತ ದಿವಾಳಿತನ ಪ್ರಕ್ರಿಯೆಯಲ್ಲಿರುವ ಆರ್‌ಕಾಮ್ ಅಂಬಾನಿ ನೇತೃತ್ವದ ಅನಿಲ ಧೀರುಭಾಯಿ ಅಂಬಾನಿ ಗ್ರೂಪ್‌ನ ಅಂಗಸಂಸ್ಥೆಯಾಗಿದೆ.
ಬಿ ಎಸ್ ಇ ಗೆ ಸಲ್ಲಿಸಿರುವ ಮಾಹಿತಿಯ ಪ್ರಕಾರ ಆರ್‌ಕಾಮ್ ಮತ್ತು ಅದರ ಅಂಗಸಂಸ್ಥೆಗಳು ಒಟ್ಟು 31,580 ಕೋ.ರೂ.ಸಾಲ ಪಡೆದಿದ್ದವು. ಸಾಲದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಲಾಗಿದೆ ಎನ್ನುವುದನ್ನು ಎಫ್‌ಐಸಿ ಕಂಡುಕೊಂಡಿದೆ.
ಸಾಲದ ನಿಬಂಧನೆಗಳ ಉಲ್ಲಂಘನೆಯ ಬಗ್ಗೆ ವಿವರಿಸುವಲ್ಲಿ ಕಂಪನಿಯು ವಿಫಲಗೊಂಡಿದೆ. ಖಾತೆಯ ನಿರ್ವಹಣೆಯಲ್ಲಿ ಅಕ್ರಮಗಳ ಕುರಿತು ತನ್ನ ಪ್ರಶ್ನೆಗಳಿಗೆ ಆರ್ ಕಾಮ್ ತೃಪ್ತಿಕರ ಉತ್ತರಗಳನ್ನು ನೀಡಿಲ್ಲ ಎಂದು ಎಸ್‌ಬಿಐ ಹೇಳಿದೆ.
ತನ್ನ ದಿವಾಳಿತನ ಪ್ರಕ್ರಿಯೆ ಯೋಜನೆಯನ್ನು ತನ್ನ ಸಾಲದಾತರ ಸಮಿತಿಯು ಈಗಾಗಲೇ ಅನುಮೋದಿಸಿದೆ ಮತ್ತು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣದಿಂದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ ಎಂದು ಆರ್‌ಕಾಮ್ ಬಿ ಎಸ್‌ಇ ಗೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದೆ.
ಎಸ್‌ಬಿಐ ಡಿಸೆಂಬರ್ 2023,ಮಾರ್ಚ್ 2024 ಮತ್ತು ಸೆಪ್ಟಂಬರ್ 2024ರಲ್ಲಿ ಆರ್ ಕಾಮ್ ಗೆ ಶೋಕಾಸ್ ನೋಟಿಸ್‌ಗಳನ್ನು ಹೊರಡಿಸಿತ್ತು.