×
Ad

ಪಿಯುಸಿಎಲ್ ಪ್ರಧಾನ ಕಾರ್ಯದರ್ಶಿ ಡಾ.ವಿ.ಸುರೇಶ್ ಮೇಲಿನ ದಾಳಿ ಖಂಡಿಸಿದ ಎಪಿಸಿಆರ್

Update: 2025-11-04 15:52 IST

ಡಾ.ವಿ. ಸುರೇಶ್ (Photo: clarionindia.net)

ಚೆನ್ನೈ : ತಿರುನಲ್ವೇಲಿ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಗ್ರಾಮಸ್ಥರು ಎದುರಿಸುತ್ತಿರುವ ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳ ಕುರಿತು ಚರ್ಚಿಸಲು ನಾಗರಿಕ ಸಮಿತಿ ʼಅರಪ್ಪೋರ್ ಇಯಕ್ಕಂʼ ಆಯೋಜಿಸಿದ್ದ ಸಾರ್ವಜನಿಕ ಅಹವಾಲು ಆಳಿಸುವ ಸಂದರ್ಭದಲ್ಲಿ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮದ್ರಾಸ್ ಹೈಕೋರ್ಟ್‌ ಹಿರಿಯ ವಕೀಲ ಡಾ.ವಿ. ಸುರೇಶ್ ಅವರ ಮೇಲೆ ನಡೆದ ಹಲ್ಲೆಯನ್ನು ನಾಗರಿಕ ಹಕ್ಕುಗಳ ರಕ್ಷಣಾ ಸಂಘ ಎಪಿಸಿಆರ್ ತೀವ್ರವಾಗಿ ಖಂಡಿಸಿದೆ.

ಡಾ. ವಿ. ಸುರೇಶ್, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL), ಅರಪ್ಪೋರ್ ಇಯಕ್ಕಂ ಸಂಘಟನೆ ಮತ್ತು ತಿರುವೆಣ್ಣಲ್ವೇಲಿ ಜಿಲ್ಲೆಯ ಜನರ ಜೊತೆ ಒಗ್ಗಟ್ಟನ್ನು ಪ್ರದರ್ಶಿಸುವುದಾಗಿ ಎಪಿಸಿಆರ್ ಹೇಳಿದೆ.

ಈ ದಾಳಿಯು ನಾಗರಿಕ ಹಕ್ಕುಗಳ ಕಾರ್ಯಕರ್ತರನ್ನು ಬೆದರಿಸಲು ಮತ್ತು ಅಕ್ರಮ ಗಣಿಗಾರಿಕೆ ಹಾಗೂ ಪರಿಸರ ಹಾನಿ ವಿರುದ್ಧ ಧ್ವನಿ ಎತ್ತುವ ನಾಗರಿಕರನ್ನು ಮೌನಗೊಳಿಸುವ ಪ್ರಯತ್ನವಾಗಿದೆ. ಆದ್ದರಿಂದ ತಮಿಳುನಾಡು ಸರಕಾರ ದಾಳಿಯ ಬಗ್ಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕು. ಡಾ.ವಿ. ಸುರೇಶ್ ಅವರ ಭದ್ರತೆಗೆ ಕ್ರಮವನ್ನು ಕೈಗೊಳ್ಳಬೇಕು ಎಂದು ಸಂಘಟನೆಯು ಆಗ್ರಹಿಸಿದೆ.

ಗಣಿಗಾರಿಕೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಳಕೆ ಪಾರದರ್ಶಕ ಮತ್ತು ಪರಿಸರ ಸಂರಕ್ಷಣೆಯ ನಿಯಮಗಳಡಿ ನಡೆಯಬೇಕು. ಹಿಂಸೆ ಅಥವಾ ಬೆದರಿಕೆ ಹಾಕುವವರ ವಿರುದ್ಧ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದೆ.

ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವಲ್ಲಿ, ನಾಗರಿಕರ ಪಾಲ್ಗೊಳ್ಳುವಿಕೆಗೆ ಸಹಾಯ ಮಾಡುವಲ್ಲಿ ಮತ್ತು ಪರಿಸರ ಮತ್ತು ಹಿಂದುಳಿದ ಸಮುದಾಯಗಳನ್ನು ರಕ್ಷಿಸುವಲ್ಲಿ ಪಿಯುಸಿಎಲ್ ಮತ್ತು ಅರಪ್ಪೂರ್ ಇಯಕ್ಕಮ್ ಮಾಡಿದ ಧೈರ್ಯಶಾಲಿ ಕಾರ್ಯವನ್ನು ಎಪಿಸಿಆರ್ ಶ್ಲಾಘಿಸಿದೆ.

ಈ ದಾಳಿ ಕೇವಲ ವ್ಯಕ್ತಿ ಮೇಲಿನ ದಾಳಿಯಲ್ಲ. ಇದು ಜನರ ಹಕ್ಕುಗಳ ಮೇಲಿನ ದಾಳಿಯಾಗಿದೆ. ಮುಕ್ತವಾಗಿ ಮಾತನಾಡುವ, ಸಾರ್ವಜನಿಕ ವಿಚಾರಣೆಗಳನ್ನು ನಡೆಸುವ ಹಕ್ಕು, ಸಾರ್ವಜನಿಕ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವ ಹಕ್ಕಿನ ಮೇಲಿನ ದಾಳಿಯಾಗಿದೆ. ಅವರ ವಿರುದ್ಧ ಸರಕಾರ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದರು.

ನಾಗರಿಕ ಸಮಾಜದ ಹೊಣೆಗಾರಿಕೆ, ಹಕ್ಕುಗಳು ಮತ್ತು ರಕ್ಷಣೆಗಾಗಿ ವಕಾಲತ್ತು ವಹಿಸುವುದನ್ನು APCR ಮುಂದುವರಿಸುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News