ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಕುರಿತು ವಾಗ್ವಾದ: ಕಾರು ಚಾಲಕನನ್ನು ಹತ್ಯೆಗೈದ ಯುವಕರು!
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸಾರ್ವಜನಿಕ ಶೌಚಾಲಯವೊಂದರ ಬಳಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಸಂಬಂಧಿಸಿದಂತೆ ನಡೆದ ವಾಗ್ಯುದ್ಧದ ವೇಳೆ ಯುವಕರ ಗುಂಪೊಂದು 27 ವರ್ಷದ ಕಾರು ಚಾಲಕನನ್ನು ಇರಿದು ಹತ್ಯೆಗೈದಿರುವ ಘಟನೆ ಆಗ್ನೇಯ ದಿಲ್ಲಿಯ ಭೋಗಾಲ್‌ನಲ್ಲಿ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. ಅರೋಪಿಗಳು ಮದ್ಯದ ಅಮಲಿನಲ್ಲಿದ್ದರು ಎನ್ನಲಾಗಿದೆ.
ಮೃತ ಕಾರು ಚಾಲಕನನ್ನು ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ನಿವಾಸಿ ಕುಲ್‌ದೀಪ್ ಅಲಿಯಾಸ್ ರಾಮ್ ಸಿಂಗ್ ಎಂದು ಗುರುತಿಸಲಾಗಿದೆ.
ಬುಧವಾರ ಬೆಳಗ್ಗೆ ಬಾರಾಪುಲ ಫ್ಲೈಓವರ್ ಕೆಳಗೆ ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ 19 ವರ್ಷದ ಮುಖ್ಯ ಆರೋಪಿ ಇಮ್ರಾನ್ ಅಲಿಯಾಸ್ ಪನ್ವಾಡಿಯನ್ನು ಬಂಧಿಸಲಾಗಿದ್ದು, ಇನ್ನೂ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬುಧವಾರ(ಡಿಸೆಂಬರ್ 3)ದಂದು ಹಝ್ರತ್ ನಿಝಾಮುದ್ದೀನ್ ರೈಲ್ವೆ ನಿಲ್ದಾಣದ ಬಳಿ ಅಪರಿಚಿತ ಮೃತದೇಹವೊಂದು ಪತ್ತೆಯಾಗಿದೆ ಎಂಬ ಮಾಹಿತಿ ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳದಲ್ಲಿದ್ದ 500ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ಪೈಕಿ ಭೋಗಾಲ್‌ನ ಜೈನಮಂದಿರದ ಬಳಿ ಇರುವ ಸಾರ್ವಜನಿಕ ಶೌಚಾಲಯದ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳಿಂದ ಮೊದಲ ಸುಳಿವು ದೊರೆತಿದೆ. ಇದನ್ನು ಬಳಸಿಕೊಂಡು ತಾಂತ್ರಿಕ ನಿಗಾ ಇರಿಸಿದ ಪೊಲೀಸರು, ಶಂಕಿತ ಆರೋಪಿಗಳ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಇಮ್ರಾನ್ ವಿರುದ್ಧ ಈ ಹಿಂದೆ ಮೂರು ಸರಗಳ್ಳತನ ಹಾಗೂ ಕಳವು ಪ್ರಕರಣಗಳು ದಾಖಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇನ್ನೂ ಮೂವರು ಅಪ್ರಾಪ್ತ ಆರೋಪಿಗಳೊಂದಿಗೆ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.