×
Ad

ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆಯೇ ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ?

ಪಶ್ಚಿಮ ಬಂಗಾಳದಲ್ಲಿ ಪಕ್ಷ ಆರಂಭಿಸುವ ಸಾಧ್ಯತೆ: ವರದಿ

Update: 2026-01-29 15:49 IST

ಅರಿಜಿತ್ ಸಿಂಗ್ (Photo: Instagram/@arijitsingh)

ಹೊಸದಿಲ್ಲಿ: ಖ್ಯಾತ ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ರಾಜಕೀಯ ಕ್ಷೇತ್ರಕ್ಕೆ ಕಾಲಿಡುವ ಸಾಧ್ಯತೆ ಕುರಿತು ಊಹಾಪೋಹಗಳು ಮುಂದುವರಿದಿವೆ. ಪಶ್ಚಿಮ ಬಂಗಾಳದಲ್ಲಿ ತಮ್ಮದೇ ಆದ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಬಗ್ಗೆ ಅವರು ಚಿಂತನೆ ನಡೆಸುತ್ತಿದ್ದಾರೆ ಎನ್ನುವ ವರದಿಗಳು ಪ್ರಕಟವಾಗಿವೆ.

ವರದಿಗಳ ಪ್ರಕಾರ, ಅರಿಜಿತ್ ಸಿಂಗ್ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುವ ಉದ್ದೇಶದಿಂದ ಪ್ರಾರಂಭದಲ್ಲಿ ತಳಮಟ್ಟದ ಸಾಮಾಜಿಕ ಚಟುವಟಿಕೆಗಳ ಮೂಲಕ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಆದರೆ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತಕ್ಷಣ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಿಯಾಗಂಜ್ ಮೂಲದವರಾದ ಅರಿಜಿತ್ ಸಿಂಗ್, ತಮ್ಮ ರಾಜಕೀಯ ಯೋಜನೆಗಳ ಕುರಿತು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೂ, ಅವರ ಸಂಭಾವ್ಯ ರಾಜಕೀಯ ಪ್ರವೇಶ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದಕ್ಕೂ ಮುನ್ನ, ಹಿನ್ನೆಲೆ ಗಾಯನದಿಂದ ನಿವೃತ್ತಿಯಾಗುವುದಾಗಿ ಅರಿಜಿತ್ ಸಿಂಗ್ ಘೋಷಿಸಿದ್ದು, ಸಂಗೀತ ಲೋಕದಲ್ಲಿ ಅಚ್ಚರಿ ಮೂಡಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಂದೇಶದಲ್ಲಿ, ತಮ್ಮ ವೃತ್ತಿಜೀವನದ ಅವಧಿಯಲ್ಲಿ ಪ್ರೀತಿ ಮತ್ತು ಬೆಂಬಲ ನೀಡಿದ ಜನರಿಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದರು.

ಒಂದು ದಶಕಕ್ಕೂ ಹೆಚ್ಚು ಕಾಲ ಹಿಂದಿ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಪ್ರಭಾವ ಬೀರಿರುವ ಅರಿಜಿತ್ ಸಿಂಗ್, ಅನೇಕ ಜನಪ್ರಿಯ ಹಾಡುಗಳಿಗೆ ಧ್ವನಿ ನೀಡಿ, ತಮ್ಮ ಪೀಳಿಗೆಯ ಪ್ರಮುಖ ಗಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News