"ಸರಕಾರಿ ಉದ್ಯೋಗಕ್ಕೆ ನಕಲಿ ಅಂಗವೈಕಲ್ಯ ಪ್ರಮಾಣಪತ್ರ ನೀಡಿದ್ದಾರೆ": ಆದಿತ್ಯನಾಥ್ ಸರಕಾರಕ್ಕೆ ಬೆಂಬಲಿಸಿ ರಾಜೀನಾಮೆ ನೀಡಿದ GST ಉಪ ಆಯುಕ್ತನ ವಿರುದ್ಧ ಸಹೋದರನಿಂದಲೇ ದೂರು
ಪ್ರಶಾಂತ್ ಕುಮಾರ್ ಸಿಂಗ್ (Screengrab:X/@Benarasiyaa)
ಹೊಸದಿಲ್ಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಬಗ್ಗೆ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜಿಎಸ್‌ಟಿ ಉಪ ಆಯುಕ್ತ ಪ್ರಶಾಂತ್ ಕುಮಾರ್ ಸಿಂಗ್ ಮಂಗಳವಾರ ತಮ್ಮ ರಾಜೀನಾಮೆಯನ್ನು ನೀಡಿದ್ದಾರೆ.
ಪಿಸಿಎಸ್ ಅಧಿಕಾರಿ ಅಲಂಕಾರ್ ಅಗ್ನಿಹೋತ್ರಿ ಅವರನ್ನು ಅಶಿಸ್ತು ಮತ್ತು ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಮಾನತುಗೊಳಿಸಿದ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ. ಅಲಂಕಾರ್ ಅಗ್ನಿಹೋತ್ರಿ ಯುಜಿಸಿಯ ಹೊಸ ನಿಯಮಗಳನ್ನು ವಿರೋಧಿಸಿದ್ದರು ಮತ್ತು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ರಾಜೀನಾಮೆ ವೇಳೆ ಆರೋಪಿಸಿದ್ದರು.
ಅಯೋಧ್ಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಶಾಂತ್ ಕುಮಾರ್ ಸಿಂಗ್, "ನಾನು ಎರಡು ರಾತ್ರಿ ನಿದ್ದೆ ಮಾಡಿರಲಿಲ್ಲ. ಸರಕಾರ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಬೆಂಬಲಿಸಿ ಮತ್ತು ಸ್ವಾಮಿ ಅವಿಮುಕ್ತೇಶ್ವರಾನಂದ ಅವರನ್ನು ವಿರೋಧಿಸಿ ನಾನು ರಾಜೀನಾಮೆ ನೀಡಿದ್ದೇನೆ. ಸಿಎಂ ಆದಿತ್ಯನಾಥ್ ವಿರುದ್ಧದ ಹೇಳಿಕೆಗಳಿಂದ ನನಗೆ ನೋವಾಗಿದೆ. ನನಗೆ ಅದನ್ನು ಸಹಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾನು ರಾಜೀನಾಮೆ ನೀಡಲು ನಿರ್ಧರಿಸಿದೆ" ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಪವಿತ್ರ ಭೂಮಿಯಾದ ಪ್ರಯಾಗ್‌ರಾಜ್‌ನಿಂದ ಜಾತಿ ಮತ್ತು ಧರ್ಮದ ಆಧಾರದ ಮೇಲೆ ರಾಷ್ಟ್ರವನ್ನು ವಿಭಜಿಸುವ ಹೇಯ ಪ್ರಯತ್ನಗಳು ನಡೆದಿವೆ. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಮುಖ್ಯಮಂತ್ರಿ ವಿರುದ್ಧ ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಪ್ರಶಾಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರಿಗೆ ಕಳುಹಿಸಿರುವುದಾಗಿ ಹೇಳಿದ್ದಾರೆ.
ಆದರೆ, ಸರಕಾರಿ ಉದ್ಯೋಗ ಪಡೆಯಲು ನಕಲಿ ಅಂಗವೈಕಲ್ಯ ಪ್ರಮಾಣಪತ್ರ ಬಳಸಿದ್ದಾರೆ ಎಂದು ಆರೋಪಿಸಿ ಅಯೋಧ್ಯೆ ಉಪ ಆಯುಕ್ತ ಪ್ರಶಾಂತ್ ಕುಮಾರ್ ಸಿಂಗ್ ವಿರುದ್ಧ ಅವರ ಹಿರಿಯ ಸಹೋದರ ಡಾ.ವಿಶ್ವಜೀತ್ ಸಿಂಗ್ ದೂರು ನೀಡಿದ್ದಾರೆ.
ತಮ್ಮ ಕಿರಿಯ ಸಹೋದರ ನಕಲಿ ಅಂಗವೈಕಲ್ಯ ಪ್ರಮಾಣಪತ್ರವನ್ನು ಬಳಸಿಕೊಂಡು ತಮ್ಮ ಸರಕಾರಿ ನೇಮಕಾತಿಯನ್ನು ಪಡೆದುಕೊಂಡಿದ್ದಾರೆ ಎಂದು ಇದಕ್ಕೂ ಮೊದಲು ಡಾ.ವಿಶ್ವಜೀತ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದರು.
ಸಿಎಂಒಗೆ ಕಳುಹಿಸಿದ ಪತ್ರದಲ್ಲಿ ಡಾ.ವಿಶ್ವಜೀತ್ ಸಿಂಗ್ ಅವರು ಅಂಗವೈಕಲ್ಯ ಪ್ರಮಾಣ ಪತ್ರದ ನೈಜತೆ ಕುರಿತು ಮರು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ರಾಜೀನಾಮೆ ನೀಡಿರುವುದು ಪರಿಶೀಲನೆ ಮತ್ತು ಕಾನೂನು ಕ್ರಮಗಳನ್ನು ತಪ್ಪಿಸಲು ಮಾಡಿರುವ ನಾಟಕವಾಗಿರಬಹುದು ಎಂದು ಹೇಳಿದ್ದಾರೆ.