ಕಾಂಗ್ರೆಸ್ ಪಕ್ಷದೊಳಗೆ ಬಿಕ್ಕಟ್ಟು ವದಂತಿ ನಡುವೆಯೇ ರಾಹುಲ್ ಗಾಂಧಿ, ಖರ್ಗೆಯನ್ನು ಭೇಟಿಯಾದ ಶಶಿ ತರೂರ್
Photo credit: X/@ShashiTharoor
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯ ಕುರಿತು ಸರಣಿ ಪ್ರಶಂಸೆಯ ಹೇಳಿಕೆಗಳನ್ನು ನೀಡುವ ಮೂಲಕ, ಬಿಜೆಪಿಗೆ ಪಕ್ಷಾಂತರ ಮಾಡಬಹುದು ಎಂಬ ವದಂತಿಗೆ ಕಾರಣವಾಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಗುರುವಾರ ಬೆಳಗ್ಗೆ ಸಂಸತ್ ಭವನದಲ್ಲಿ ಕಾಂಗ್ರೆಸ್ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸುಮಾರು 30 ನಿಮಿಷಗಳ ಮಾತುಕತೆ ನಡೆಸಿದರು ಎಂದು ವರದಿಯಾಗಿದೆ.
ತಮ್ಮ ತವರು ರಾಜ್ಯವಾದ ಕೇರಳದಲ್ಲಿ ಈ ವರ್ಷ ನಡೆಯಲಿರುವ ಚುನಾವಣೆ ಕುರಿತು ನಡೆದ ಚರ್ಚೆ ಸೇರಿದಂತೆ ಹಲವು ಉನ್ನತ ಕಾಂಗ್ರೆಸ್ ನಾಯಕರೊಂದಿಗಿನ ಸಭೆಗಳನ್ನು ಶಶಿ ತರೂರ್ ತಪ್ಪಿಸಿಕೊಂಡಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು.
ಶಶಿ ತರೂರ್ ಅವರು ತಮ್ಮ ದೃಷ್ಟಿಕೋನ ಹಾಗೂ ಕಳವಳಗಳನ್ನು ವ್ಯಕ್ತಪಡಿಸಲು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಬಯಸಿದ್ದರು ಹಾಗೂ ಚುನಾವಣೆಗೂ ಮುನ್ನ ಅವರ ಕುಂದುಕೊರತೆಗಳನ್ನು ಪರಿಹರಿಸಲು ಪಕ್ಷ ಪ್ರಯತ್ನಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಶಶಿ ತರೂರ್ ಹಾಗೂ ಕಾಂಗ್ರೆಸ್ ನಡುವಿನ ಸಂಬಂಧ ಹಳಸಿದಂತೆ ಕಂಡು ಬಂದಿತ್ತು. ತಿರುವನಂತಪುರಂನ ನಾಲ್ಕು ಬಾರಿಯ ಸಂಸದರಾದ ಶಶಿ ತರೂರ್, ಪ್ರಧಾನಿ ನರೇಂದ್ರ ಮೋದಿ ಈ ಬಿಕ್ಕಟ್ಟನ್ನು ನಿರ್ವಹಿಸಿದ ರೀತಿಯನ್ನು ಬಲವಾಗಿ ಶ್ಲಾಘಿಸಿದ್ದರು. ಈ ಶ್ಲಾಘನೆಯ ವಿರುದ್ಧ ಕಾಂಗ್ರೆಸ್ ನಾಯಕರು ತೀಕ್ಷ್ಣ ವಾಗ್ದಾಳಿ ನಡೆಸಿದ್ದರು. ಈ ಪೈಕಿ ಬಹುತೇಕರು ಶಶಿ ತರೂರ್ ಬಿಜೆಪಿಯತ್ತ ವಾಲಲು ಒಂದು ಆಹ್ವಾನವನ್ನು ಎದುರು ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.