×
Ad

ಪತ್ನಿ, ಪುತ್ರಿಯ ಹತ್ಯೆ ಮಾಡಿದ ಸೇನಾ ಸಿಬ್ಬಂದಿಯ ಬಂಧನ

Update: 2023-08-02 08:55 IST

ಜೋಧಪುರ: ನಿದ್ದೆಯಲ್ಲಿದ್ದ ಪತ್ನಿ ಹಾಗೂ ಪುತ್ರಿಯನ್ನು ಹತ್ಯೆ ಮಾಡಿ ಅದನ್ನು ಆಕಸ್ಮಿಕ ಘಟನೆ ಎಂದು ಬಿಂಬಿಸಲು ಹೊರಟ ಆರೋಪದಲ್ಲಿ ಭಾರತೀಯ ಸೇನೆಯ ಸಿಬ್ಬಂದಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ನಸುಕಿನಲ್ಲಿ ಆರೋಪಿ ರಾಮಪ್ರಸಾದ್ ಈ ಕೃತ್ಯ ಎಸಗಿದ್ದ ಎಂದು ಆರೋಪಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿದ ಮತ್ತು ಸುಟ್ಟ ಗಾಯಗಳಿಂದ ಸಾವು ಸಂಭವಿಸಿದೆ ಎಂಬ ಅಂಶವನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕುಟುಂಬದ ಇತರ ಸದಸ್ಯರು ಆಗಮಿಸಿದ ಬಳಿಕ ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು ಎಂದು ಪೂರ್ವ ವಲಯದ ಡಿಸಿಪಿ ಅಮೃತಾ ದುಹಾನ್ ವಿವರಿಸಿದ್ದಾರೆ. ಪತ್ನಿ ಹಾಗೂ ಪುತ್ರಿಯನ್ನು ಮೊದಲು ಉಸಿರುಗಟ್ಟಿಸಿ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹೇಳಲಾಗಿದೆ. ವರದಿ ಆಧಾರದಲ್ಲಿ ರಾಮ್‍ಪ್ರಸಾದ್‍ನನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದಾಗ ಪತ್ನಿ ರುಕ್ಮೀನಾ (25) ಹಾಗೂ ಮಗಳು ರಿಧಿಮ (2) ಅವರನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಕ್ಕಿಂ ಮೂಲದ ರಾಮ್‍ಪ್ರಸಾದ್, ನೇಪಾಳದ ರುಕ್ಮೀನಾ ಅವರನ್ನು 2020ರ ಜನವರಿಯಲ್ಲಿ ವಿವಾಹವಾಗಿದ್ದ. ಈತನನ್ನು 2020ರ ಆಗಸ್ಟ್ ನಲ್ಲಿ ಜೋಧಪುರಕ್ಕೆ ವರ್ಗಾಯಿಸಲಾಗಿತ್ತು. ಇಬ್ಬರು ಪದೇ ಪದೇ ಜಗಳವಾಡುತ್ತಿದ್ದರು ಎಂದು ತಿಳಿದು ಬಂದಿದೆ. ಪತ್ನಿಯನ್ನು ಮುಗಿಸುವ ನಿರ್ಧಾರಕ್ಕೆ ಬಂದು ಈ ಸಂಚು ರೂಪಿಸಿದ್ದ. ಜತೆಗೆ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಸಲುವಾಗಿ ಪುಟ್ಟ ಮಗುವನ್ನೂ ಕೊಲ್ಲಲು ನಿರ್ಧರಿಸಿದ ಎಂದು ಹೇಳಲಾಗಿದೆ.

ಮುಂಜಾನೆ 4ರ ಸುಮಾರಿಗೆ ನಿದ್ದೆಯಲ್ಲಿದ್ದ ಇಬ್ಬರನ್ನೂ ಉಸಿರುಗಟ್ಟಿಸಿ ಕೊಂದು ಬಳಿಕ ಸಾಕ್ಷ್ಯ ನಾಶಪಡಿಸುವ ಸಲುವಾಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಎಂದು ಹೇಳಲಾಗಿದೆ. ಕ್ಲರ್ಕ್ ಹುದ್ದೆಯಿಂದ ನಾಯಕ್ ಹುದ್ದೆಗೆ ಭಡ್ತಿ ಪಡೆದಿದ್ದ ರಾಮ್‍ಪ್ರಸಾದ್ ತರಬೇತಿಗಾಗಿ ಸೋಮವಾರ ಬೆಂಗಳೂರಿಗೆ ತೆರಳಬೇಕಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News