ಕೇರಳ | ಶಾಲಾ ಬ್ಯಾಗ್ ಗಳ ಹೊರೆ ಇಳಿಕೆ, ಲಾಸ್ಟ್ ಬೆಂಚ್ ಸಿಸ್ಟಮ್ ಗೂ ವಿರಾಮ!
ಸಾಂದರ್ಭಿಕ ಚಿತ್ರ (AI)
ತಿರುವನಂತಪುರಂ: ಶಾಲಾ ಬ್ಯಾಗ್ ಗಳ ಹೊರೆಯನ್ನು ತಗ್ಗಿಸುವ ಹಾಗೂ ಲಾಸ್ಟ್ ಬೆಂಚ್ ಸಿಸ್ಟಮ್‌ಗೆ ವಿರಾಮ ಹಾಕುವ ಪ್ರಸ್ತಾವ ಹೊಂದಿರುವ ಕರಡು ವರದಿಯೊಂದಕ್ಕೆ ರಾಜ್ಯ ಪಠ್ಯಕ್ರಮ ಸುಧಾರಣಾ ಸಮಿತಿ ಅನುಮೋದನೆ ನೀಡಿದೆ ಎಂದು ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಹೇಳಿದ್ದಾರೆ.
ಮಕ್ಕಳು ಶಾಲೆಗಳಿಗೆ ಕೊಂಡೊಯ್ಯುವ ಶಾಲಾ ಬ್ಯಾಗ್ ಗಳ ಹೊರೆಯನ್ನು ತಗ್ಗಿಸುವ ಮೂಲಕ, ಅವರ ದೈಹಿಕ ಮತ್ತು ಮಾನಸಿಕ ಉಲ್ಲಾಸವನ್ನು ಹೆಚ್ಚಿಸುವ ಮತ್ತು ಶಾಲಾ ತರಗತಿಗಳನ್ನು ಪ್ರಜಾಸತ್ತಾತ್ಮಕಗೊಳಿಸುವ ಮೂಲಕ ಶಾಲೆಗಳಲ್ಲಿ ಕಲಿಕಾ ವಾತಾವರಣವನ್ನು ನಿರ್ಮಾಣ ಮಾಡುವ ಗುರಿಯನ್ನು ಈ ಪ್ರಸ್ತಾವನೆಗಳು ಹೊಂದಿವೆ ಎಂದು ಸಚಿವ ವಿ.ಶಿವನ್ ಕುಟ್ಟಿ ಹೇಳಿದ್ದಾರೆ.
ಈ ಕುರಿತು ವಿಸ್ತೃತ ಅಧ್ಯಯನ ನಡೆಸಿ ಕರಡು ವರದಿ ಸಲ್ಲಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಗೆ ಸೂಚಿಸಲಾಗಿತ್ತು. ವರದಿಯನ್ನು ಸಮಿತಿಯು ಇದೀಗ ಅಂಗೀಕರಿಸಿದೆ. ಕರಡು ವರದಿಯ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಪ್ರಕಟನೆಯಲ್ಲಿ ಹೇಳಿದ್ದಾರೆ.
ಈ ಕರಡು ವರದಿಯು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಸಾರ್ವಜನಿಕರು ಈ ಕರಡು ವರದಿಯ ಕುರಿತು ಜನವರಿ 20ರವರೆಗೆ ತಮ್ಮ ಅಭಿಪ್ರಾಯಗಳು, ಸಲಹೆಗಳನ್ನು ನೀಡಬಹುದಾಗಿದೆ ಎಂದು ಸಚಿವ ವಿ.ಶಿವನ್ ಕುಟ್ಟಿ ತಿಳಿಸಿದ್ದಾರೆ.