ಮಧ್ಯಪ್ರದೇಶ| ಆರೆಸ್ಸೆಸ್ ಕಚೇರಿಯಲ್ಲಿ ಇಂದೋರ್ ಜಿಲ್ಲಾಧಿಕಾರಿ, ಮೇಯರ್ ಸಭೆ; ಕಲುಷಿತ ನೀರು ಕುಡಿದು ಹಲವರು ಮೃತಪಟ್ಟ ಘಟನೆ ಬೆನ್ನಲ್ಲೆ ಹೊಸ ವಿವಾದ ಸೃಷ್ಟಿ
ಸಾಂದರ್ಭಿಕ ಚಿತ್ರ (PTI)
ಇಂದೋರ್ (ಮಧ್ಯಪ್ರದೇಶ): ಇಂದೋರ್ ಜಿಲ್ಲಾಧಿಕಾರಿ ಶಿವಂ ವರ್ಮಾ ಮತ್ತು ಮೇಯರ್ ಪುಷ್ಯಮಿತ್ರ ಭಾರ್ಗವ ಅವರು ಬುಧವಾರ ತಡರಾತ್ರಿ ಇಲ್ಲಿಯ ಆರೆಸ್ಸೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದು, ಇದು ಹೊಸ ರಾಜಕೀಯ ವಿವಾದವನ್ನು ಸೃಷ್ಟಿಸಿದೆ. ನಗರದ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರಿನ ಸೇವನೆಯಿಂದ ಕನಿಷ್ಠ ಎಂಟು ಜನರು ಮೃತಪಟ್ಟ ಕೆಲವೇ ದಿನಗಳಲ್ಲಿ ಈ ಸಭೆ ನಡೆದಿರುವ ಹಿನ್ನೆಲೆಯಲ್ಲಿ ಈ ಅಧಿಕಾರಿಗಳು ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದನ್ನು ಭಾರ್ಗವ ದೃಢಪಡಿಸಿದರಾದರೂ ಅದನ್ನು ಲಘುವಾಗಿ ಪರಿಗಣಿಸಿದ್ದಾರೆ. ‘ಓರ್ವ ಸ್ವಯಂಸೇವಕನಾಗಿ ನಾನು ಆಗಾಗ್ಗೆ ಆರೆಸ್ಸೆಸ್ ಕಚೇರಿಗೆ ಭೇಟಿ ನೀಡುತ್ತಿರುತ್ತೇನೆ. ಇದಕ್ಕೂ ಈಗಿನ ಬಿಕ್ಕಟ್ಟಿಗೂ ಯಾವುದೇ ಸಂಬಂಧವಿಲ್ಲ’ ಎಂದು Indian Express ಜೊತೆ ಮಾತನಾಡಿದ ಅವರು ಹೇಳಿದರು. ವರ್ಮಾ ಸಭೆಯ ಬಗ್ಗೆ ಪ್ರತಿಕ್ರಿಯಿಸಲಿಲ್ಲ.
ಆರೆಸ್ಸೆಸ್‌ನ ಮಾಲ್ವಾ ಪ್ರಾಂತ ಪ್ರಚಾರಕ ರಾಜಮೋಹನ ಕರೆದಿದ್ದ ಸಭೆಯಲ್ಲಿ ಚರ್ಚೆಗಳು ಬಿಕ್ಕಟ್ಟು ನಿರ್ವಹಣೆ ವೈಫಲ್ಯಗಳನ್ನು ಕೇಂದ್ರೀಕರಿಸಿತ್ತು ಎಂದು ಬಲ್ಲ ಮೂಲಗಳು ತಿಳಿಸಿವೆ.
ಇದೊಂದು ಇಬ್ಬರು ಅಧಿಕಾರಿಗಳ ಸಾಮಾನ್ಯ ಭೇಟಿ ಎಂದು ಬಿಜೆಪಿ ಬಣ್ಣಿಸಿದ್ದರೆ, ಇಂದೋರಿನ ನಲ್ಲಿಗಳ ಮೂಲಕ ವಿಷ ಹರಿಯುತ್ತಿರುವಾಗ,ಅಮಾಯಕ ನಾಗರಿಕರ ಸಾವುಗಳಿಂದ ಅವರ ಕುಟುಂಬಗಳು ಶೋಕದಲ್ಲಿ ಮುಳುಗಿರುವಾಗ, ಸರಕಾರವು ವಿಫಲಗೊಂಡಿರುವಾಗ ಜಿಲ್ಲಾಧಿಕಾರಿಗಳು ಸ್ಥಳದಲ್ಲಿ, ಆಸ್ಪತ್ರೆಗಳಲ್ಲಿ ಅಥವಾ ಸಂತ್ರಸ್ತ ಕುಟುಂಬಗಳ ಜೊತೆಯಲ್ಲಿರಬೇಕೇ ಅಥವಾ ಆರೆಸ್ಸೆಸ್ ಕಚೇರಿಯೊಳಗೆ ಇರಬೇಕೇ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಮತ್ತು ಮೇಯರ್ ಆರೆಸ್ಸೆಸ್ ಕಚೇರಿಗೆ ತಡರಾತ್ರಿ ಹೋಗಿದ್ದು ಸಾಮಾನ್ಯ ಭೇಟಿಯಲ್ಲ ಎಂದು ಹೇಳಿದ ಅವರು,ಇದು ಆಡಳಿತದ ನಿಷ್ಪಕ್ಷತೆಗೆ ಧಕ್ಕೆಯನ್ನುಂಟು ಮಾಡಿರುವ ಘಟನೆಯಾಗಿದೆ ಎಂದರು.
ಆರೋಪವನ್ನು ತಳ್ಳಿಹಾಕಿದ ಬಿಜೆಪಿ ವಕ್ತಾರ ಶಿವಂ ಶುಕ್ಲಾ ಅವರು, ಇದೊಂದು ಸೌಜನ್ಯದ ಭೇಟಿಯಾಗಿದ್ದು, ಅದರಲ್ಲೇನೂ ತಪ್ಪಿಲ್ಲ. ಅಧಿಕಾರಿಗಳು ಜನರನ್ನು ಭೇಟಿಯಾಗಬಾರದೇ? ಸಭೆಯ ಕುರಿತು ತಪ್ಪು ಮಾಹಿತಿ ಹರಡುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು ಎಂದು ಹೇಳಿದರು.
ಈ ಸಭೆಯು ಸಾಂಸ್ಥಿಕ ಶಿಷ್ಟಾಚಾರಗಳ ಕುರಿತು ಚರ್ಚೆಯನ್ನು ತೀವ್ರಗೊಳಿಸಿದೆ. ಐಎಎಸ್ ಅಧಿಕಾರಿಯಾಗಿ ಜಿಲ್ಲಾಧಿಕಾರಿಗಳು ರಾಜ್ಯ ಸರಕಾರದ ಆದೇಶಗಳ ಮೇರೆಗೆ ಮತ್ತು ಮೇಯರ್ ಮುನ್ಸಿಪಲ್ ಕಾನೂನುಗಳಡಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಈ ಇಬ್ಬರು ಅಧಿಕಾರಿಗಳು ಆರೆಸ್ಸೆಸ್‌ಗೆ ವಿವರಣೆಗಳನ್ನು ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.
ಕಲುಷಿತ ನೀರಿನ ಸೇವನೆಯಿಂದ ಅಸ್ವಸ್ಥಗೊಂಡವರ ಪೈಕಿ ಹೆಚ್ಚಿನವರು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು,ಇನ್ನೂ 50 ಜನರಿಗೆ ಚಿಕಿತ್ಸೆ ಮುಂದುವರಿದಿದೆ. 10 ಜನರು ಪ್ರಸ್ತುತ ಐಸಿಯುನಲ್ಲಿದ್ದಾರೆ.
ಸರಕಾರವು ಮೃತಪಟ್ಟವರ ಸಂಖ್ಯೆ 10 ಎಂದು ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರೆ,ಇಂದೋರ ಜಿಲ್ಲಾಡಳಿತವು ಪ್ರಕರಣಕ್ಕೆ ಸಂಬಂಧಿಸಿದಂತೆ 18 ಜನರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ.ಗಳ ಚೆಕ್‌ಗಳನ್ನು ವಿತರಿಸಿದೆ ಎಂದು ಸರಕಾರಿ ದಾಖಲೆಗಳು ತೋರಿಸುತ್ತಿವೆ.