ED ದುರುಪಯೋಗ ಆರೋಪಿಸಿ ಅಮಿತ್ ಶಾ ಕಚೇರಿ ಮುಂದೆ ಪ್ರತಿಭಟನೆ: ಡೆರೆಕ್ ಓ’ಬ್ರಿಯಾನ್, ಮಹುವಾ ಮೊಯಿತ್ರಾ ಸೇರಿ ಹಲವು ಟಿಎಂಸಿ ಸಂಸದರು ಪೊಲೀಸ್ ವಶಕ್ಕೆ
Photo|ANI
ಹೊಸದಿಲ್ಲಿ: ಕೋಲ್ಕತ್ತಾದ I-PAC ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿಯನ್ನು ವಿರೋಧಿಸಿ ಮತ್ತು ಕೇಂದ್ರ ಸರಕಾರ ತನಿಖಾ ಸಂಸ್ಥೆಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ತೃಣಮೂಲ ಕಾಂಗ್ರೆಸ್ (TMC) ಸಂಸದರನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಟಿಎಂಸಿ ಸಂಸದರಾದ ಡೆರೆಕ್ ಓ’ಬ್ರಿಯಾನ್, ಸತಾಬ್ದಿ ರಾಯ್, ಮಹುವಾ ಮೊಯಿತ್ರಾ, ಕೀರ್ತಿ ಆಝಾದ್ ಮತ್ತು ಇತರರು ದಿಲ್ಲಿಯ ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ದಿಲ್ಲಿ ಪೊಲೀಸರು ಡೆರೆಕ್ ಓ’ಬ್ರಿಯಾನ್, ಮಹುವಾ ಮೊಯಿತ್ರಾ ಮತ್ತು ಇತರ ಸಂಸದರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
"ನಾವು ಬಿಜೆಪಿಯನ್ನು ಸೋಲಿಸುತ್ತೇವೆ. ದಿಲ್ಲಿ ಪೊಲೀಸರು ಚುನಾಯಿತ ಸಂಸದರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ದೇಶ ನೋಡುತ್ತಿದೆ" ಎಂದು ಈ ವೇಳೆ ಮಹುವಾ ಮೊಯಿತ್ರಾ ಹೇಳಿದ್ದಾರೆ.