×
Ad

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಸ್ಪರ್ಧೆ!

Update: 2026-01-09 10:29 IST

Photo| NDTV

ಮುಂಬೈ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಗ್ಗೆ ವರದಿಯಾಗಿದೆ.

ಶ್ರೀಕಾಂತ್ ಪಂಗಾರ್ಕರ್ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ವಾರ್ಡ್ 13ರಿಂದ ಸ್ಪರ್ಧಿಸುತ್ತಿದ್ದಾನೆ. ಶ್ರೀಕಾಂತ್ ಎದುರು ಬಿಜೆಪಿ ಮತ್ತು ಇತರ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಆ ವಾರ್ಡ್‌ನಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಪಂಗಾರ್ಕರ್ 2001 ಮತ್ತು 2006ರ ನಡುವೆ ಅವಿಭಜಿತ ಶಿವಸೇನೆಯ ಜಲ್ನಾ ಮುನ್ಸಿಪಲ್ ಕೌನ್ಸಿಲ್ ಸದಸ್ಯನಾಗಿದ್ದ. 2011ರಲ್ಲಿ ಶಿವಸೇನೆ ಟಿಕೆಟ್ ನಿರಾಕರಿಸಿದ ನಂತರ ಬಲಪಂಥೀಯ ಹಿಂದೂ ಜನಜಾಗೃತಿ ಸಮಿತಿಯನ್ನು ಸೇರ್ಪಡೆಗೊಂಡಿದ್ದ. 2024ರ ವಿಧಾನಸಭಾ ಚುನಾವಣೆಗೂ ಮುನ್ನ ಶ್ರೀಕಾಂತ್‌ ಶಿವಸೇನೆಗೆ ಸೇರ್ಪಡೆಗೊಂಡಿದ್ದ. ಆದರೆ ತೀವ್ರ ಟೀಕೆ ಎದುರಾದ ಕಾರಣ ಆತನನ್ನು ಪಕ್ಷಕ್ಕೆ ಸೇರಿಸುವ ನಿರ್ಧಾರವನ್ನು ಏಕನಾಥ್‌ ಶಿಂಧೆ ಅವರು ತಡೆಹಿಡಿದಿದ್ದರು.

ರಾಜ್ಯದ ವಿವಿಧ ಭಾಗಗಳಿಂದ ಕಚ್ಚಾ ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 2018ರಲ್ಲಿ ಶ್ರೀಕಾಂತ್ ಪಂಗಾರ್ಕರ್ ನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿತ್ತು. ಈ ವೇಳೆ ಪಂಗಾರ್ಕರ್ ವಿರುದ್ಧ UAPA ಸೇರಿದಂತೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಸೆಪ್ಟೆಂಬರ್ 5, 2017ರಂದು ಬೆಂಗಳೂರಿನ ನಿವಾಸದ ಹೊರಗೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಬಂಧಿತ ಶ್ರೀಕಾಂತ್ ಪಂಗಾರ್ಕರ್‌ಗೆ ಕರ್ನಾಟಕ ಹೈಕೋರ್ಟ್2024ರ ಸೆಪ್ಟಂಬರ್‌ನಲ್ಲಿ ಜಾಮೀನು ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News