×
Ad

ಅಶ್ರಫ್ ನ ಗುಂಪು ಹತ್ಯೆ | ಪಾಕಿಸ್ತಾನ ಪರ ಘೋಷಣೆಯ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ : ಕಮಿಷನರ್

Update: 2025-05-01 18:59 IST

ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌

ಮಂಗಳೂರು: ಮಂಗಳೂರಿನ ಹೊರವಲಯದ ಕುಡುಪುವಿನಲ್ಲಿ ರವಿವಾರ ನಡೆದ ಅಶ್ರಫ್ ನ ಗುಂಪು ಹತ್ಯೆಗೆ ನಿರ್ದಿಷ್ಟ ಕಾರಣ ಏನು ಎಂದು ನಮಗೆ ಇನ್ನೂ ತಿಳಿದು ಬಂದಿಲ್ಲ. ಕೊಲೆಗೆ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಕಾರಣದ ಬಗ್ಗೆ ನಮಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಲ್ಲಿಗೆ ಅಶ್ರಫ್ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ಆತನ ಮೇಲೆ ಗುಂಪು ಹಲ್ಲೆ ಮಾಡಿ ಹತ್ಯೆ ಮಾಡಿದೆ ಎಂಬ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ಹೇಳಿಕೆಗೆ ಯಾವುದೇ ಆಧಾರವಿಲ್ಲ ಎಂದು ಸಾಬೀತಾಗಿದೆ.

ಅಲ್ಲಿದ್ದ ಸಾಕ್ಷಿಗಳು ಹಾಗು ಕೊಲೆ ಆರೋಪಿಗಳು ಈ ಬಗ್ಗೆ "ಅಲ್ಲಿ ಒಬ್ಬನ ಮೇಲೆ ಇನ್ನೊಬ್ಬ ಹಲ್ಲೆ ನಡೆಸುತ್ತಿದ್ದ. ಆಗ ಅಲ್ಲಿದ್ದವರೆಲ್ಲರೂ ಗುಂಪಿನ ಹಾಗೆ ಅವನೊಂದಿಗೆ ಸೇರಿಕೊಂಡು ಆ ಇನ್ನೊಬ್ಬನ ಮೇಲೆ ಹಲ್ಲೆ ಮಾಡಿದ್ದಾರೆ" ಎಂದು ಮಾತ್ರ ಹೇಳಿದ್ದಾರೆ. ಹಾಗಾಗಿ ಅಶ್ರಫ್ ಮೇಲೆ ಹಲ್ಲೆ ಹಾಗು ಕೊಲೆಗೆ ನಿರ್ದಿಷ್ಟ ಕಾರಣ ಏನು ಎಂಬುದು ನಮಗೆ ಇನ್ನೂ ತಿಳಿದು ಬಂದಿಲ್ಲ. ಪಾಕಿಸ್ತಾನ ಪರ ಘೋಷಣೆ ಕೂಗಿರುವ ಪ್ರತ್ಯೇಕ ಪ್ರಕರಣವೂ ದಾಖಲಾಗಿಲ್ಲ ಎಂದು ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.

ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ಅಶ್ರಫ್ ಮೇಲೆ ಗುಂಪೊಂದು ಹಲ್ಲೆ ಮಾಡಿ ಕೊಲೆ ಮಾಡಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದರು. ಆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ " ಆತ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎಂದು ನಾನು ಹೇಳಿಲ್ಲ, ಕೊಲೆ ಆರೋಪಿಗಳು ಹಾಗೆ ಹೇಳಿದ್ದಾರೆ ಎಂದು ನಾನು ಹೇಳಿದ್ದೆ " ಎಂದು ಸ್ಪಷ್ಟೀಕರಣ ಕೊಟ್ಟು ಇನ್ನಷ್ಟು ಗೊಂದಲ ಮೂಡಿಸಿದ್ದರು. ಅದಕ್ಕೂ ಮೊದಲು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಮಾಡಿ ಗುಂಪು ಹತ್ಯೆಯ ವಿವರ ಕೊಟ್ಟಿದ್ದ ಪೊಲೀಸ್ ಕಮಿಷನರ್ ಅವರೇ ಹತ್ಯೆಯಾದ ಅಶ್ರಫ್ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅಂತಹ ಎಲ್ಲ ವದಂತಿಗಳನ್ನು ಅವರು ನಿರಾಕರಿಸಿದ್ದರು.

ಗೃಹ ಸಚಿವರ ಹೇಳಿಕೆ ಬೆನ್ನಿಗೇ ಬಹುತೇಕ ಮಾಧ್ಯಮಗಳು 'ಪಾಕಿಸ್ಥಾನ ಪರ ಘೋಷಣೆ ಕೂಗಿದ್ದಕ್ಕೆ ಕೊಲೆ' ಎಂದೇ ವರದಿ ಮಾಡಿದ್ದವು.

ಗುರುವಾರ ಮತ್ತೊಮ್ಮೆ ಮಾಧ್ಯಮಗಳಿಗೆ ವಿವರ ನೀಡಿರುವ ಕಮಿಷನರ್ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಕಾರಣದ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಅಲ್ಲಿಗೆ ಪಾಕಿಸ್ತಾನ ಪರ ಘೋಷಣೆ ಎಂಬುದು ಯಾರೋ ಸೃಷ್ಟಿಸಿದ ಆಧಾರ ರಹಿತ ವದಂತಿ ಎಂಬುದು ಸಾಬೀತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News